ಕಾರ್ಮಿಕ ವರ್ಗದ ಹಿತಾಸಕ್ತಿ ರಕ್ಷಿಸಿ: ಬಿ.ಟಿ.ವಿಶ್ವನಾಥ್ ಮನವಿ

KannadaprabhaNewsNetwork | Published : May 2, 2024 12:15 AM

ಸಾರಾಂಶ

ಕಾರ್ಮಿಕ ವರ್ಗದ ಹಿತಾಸಕ್ತಿ ರಕ್ಷಿಸಲು ಮಹತ್ವದ ತ್ಯಾಗ ಮಾಡಿದ ಹೇ ಮಾರ್ಕೆಟ್ ಹುತಾತ್ಮರು, ತಮ್ಮ ತ್ಯಾಗ ಬಲಿದಾನಗಳನ್ನು ಮಾಡುವ ಮೂಲಕ ಕಾರ್ಮಿಕ ಕಾಯ್ದೆ ಜಾರಿಗೆ ಬದ್ದರಾದರು. 8 ಗಂಟೆ ದುಡಿಮೆ, 8 ಗಂಟೆ ವಿಶ್ರಾಂತಿ 8 ಗಂಟೆ ಮನರಂಜನೆಗಾಗಿ ನಡೆದ ಹೋರಾಟದಲ್ಲಿ ಹಲವು ಕಾರ್ಮಿಕರು ತಮ್ಮ ಜಿವವನ್ನೇ ಬಲಿದಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟು ದುಡಿಯುವ ವರ್ಗಗಳನ್ನು ನಾಶ ಮಾಡುತ್ತಿದೆ ಎಂದು ವಕೀಲ ಬಿ.ಟಿ.ವಿಶ್ವನಾಥ್‌ ಆರೋಪಿಸಿದರು.

ನಗರದ ಗಾಂಧಿ ಭವನದಲ್ಲಿ ಸಿಐಟಿಯು ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ಆಳುವ ವರ್ಗಗಳ ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಕಾರ್ಮಿಕ ವರ್ಗದ ಹಿತಾಸಕ್ತಿ ರಕ್ಷಿಸಲು ಮಹತ್ವದ ತ್ಯಾಗ ಮಾಡಿದ ಹೇ ಮಾರ್ಕೆಟ್ ಹುತಾತ್ಮರು, ತಮ್ಮ ತ್ಯಾಗ ಬಲಿದಾನಗಳನ್ನು ಮಾಡುವ ಮೂಲಕ ಕಾರ್ಮಿಕ ಕಾಯ್ದೆ ಜಾರಿಗೆ ಬದ್ದರಾದರು. 8 ಗಂಟೆ ದುಡಿಮೆ, 8 ಗಂಟೆ ವಿಶ್ರಾಂತಿ 8 ಗಂಟೆ ಮನರಂಜನೆಗಾಗಿ ನಡೆದ ಹೋರಾಟದಲ್ಲಿ ಹಲವು ಕಾರ್ಮಿಕರು ತಮ್ಮ ಜಿವವನ್ನೇ ಬಲಿದಾನ ಮಾಡಿದ್ದಾರೆ. ಆದರೆ, ಇವತ್ತಿನ ಆಳುವ ವರ್ಗ ಕಾರ್ಮಿಕ ಕಾನೂನು ರದ್ದು ಪಡಿಸಿ ಬಂಡವಾಳಶಾಹಿ ಕಾರ್ಪೊರೇಟ್ ಕುಳಗಳಿಗೆ ಅನುಕೂಲ ಮಾಡಲು ಕಾರ್ಮಿಕ ಸಂಹಿತೆ ಮಾಡುತ್ತಿರುವ ನರೇಂದ್ರ ಸರ್ಕಾರದ ಕೊನೆಯಾಗಬೇಕಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ಕಾರ್ಮಿಕ ದಿನಾಚರಣೆಯು ಬಂಡವಾಳ ಶಾಹಿಗಳ ಶೋಷಣೆ ವಿರುದ್ಧ ಹೋರಾಟಕ್ಕೆ ಇಳಿಸಿದ ಚರಿತ್ರಾರ್ಹ ದಿನವಾಗಿದೆ. ವಿಶ್ವದ ಕಾರ್ಮಿಕರೇ ಒಂದಾಗಿರಿ ಎಂಬ ರಣ ಕಹಳೆ ಊದಿ ದುಡಿಯುವ ಜನರನ್ನು ಮೇ ದಿನ ನಿರ್ವಹಿಸಿದ ಪಾತ್ರ ಅತ್ಯಂತ ಮಹತ್ವವಾದುದು ಎಂದರು.

ಜಾಗತಿಕ ಮಟ್ಟದಲ್ಲಿ ಕಾರ್ಮಿಕ ವರ್ಗವನ್ನು ಕನಿಷ್ಠವಾಗಿ ಬೆಸೆಯುವಲ್ಲಿ ಮೇ 1 ದಿನವು ಕಾರ್ಮಿಕ ದಿನವನ್ನಾಗಿ ನೀಡಿದ ಕಾಣಿಕೆ ಚಿರಸ್ಥಾಯಿಯಾಗಿದೆ. ಜಗದಗಲಕ್ಕೂ ಕಾರ್ಮಿಕರ ಸ್ಫೂರ್ತಿಯ ಸೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಐಟಿಯು ಅಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಖಜಾಂಚಿ ಮಹದೇವಮ್ಮ, ಮುಖಂಡರಾದ ಟಿ.ಎಲ್‌.ಕೃಷ್ಣೇಗೌಡ, ಸಿ.ಪ್ರದೀಪ್‌, ಶಶಿಪ್ರಕಾಶ್, ಪ್ರಮಿಳಾ ಕುಮಾರಿ ಭಾಗವಹಿಸಿದ್ದರು.

Share this article