- ಮಂಗಲ ಕಾರ್ಯದಲ್ಲಿ ಸ್ಥಾನ ಪಡೆದ ಅಡಕೆಯಿಂದ ಉಪ ಉತ್ಪನ್ನ ತಯಾರಿಕೆಯಾಗಲಿ: ಸಿರಿಗೆರೆ ಶ್ರೀ ಸಲಹೆ - ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣ-ಮಾರಾಟ ಸಹಕಾರ ಸಂಘ ರಜತ ಮಹೋತ್ಸವ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ (ದಾಮ್ಕೋಸ್) ರಜತ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು, "ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರೋಲ್ಲ " ಎಂಬ ಗಾದೆಮಾತಿದೆ. ಕೇಂದ್ರ ಸರ್ಕಾರ ಅಡಕೆಯಿಂದ ಕ್ಯಾನ್ಸರ್ ಬರುತ್ತದೆಂದು ಹೇಳಿ, ಅಡಕೆ ಮಾನ ಹರಾಜು ಮಾಡುತ್ತಿದೆ. ಆದರೆ, ಅಡಕೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂದರು.
ಗುಟ್ಕಾ ರಾಸಾಯನಿಕದಿಂದಲೇ ಕ್ಯಾನ್ಸರ್:ಅಡಕೆ ಕ್ಯಾನ್ಸರ್‌ಕಾರಕ ಅಲ್ಲ. ಗುಟ್ಕಾ ತಯಾರಿಸುವಾಗ ಅದಕ್ಕೆ ಸೇರಿಸುವ ರಾಸಾಯನಿಕದಿಂದ ಕ್ಯಾನ್ಸರ್ ಬರುತ್ತದೆ. ಗುಟ್ಕಾ ಮಾಡುವಾಗ ರಾಸಾಯನಿಕ ಪದಾರ್ಥ ಮಿಶ್ರಣ ಮಾಡುತ್ತಾರೆ. ಅದನ್ನು ಸೇವಿಸಿದಾಗಷ್ಟೇ ಕ್ಯಾನ್ಸರ್ ಬರುತ್ತದೆ. ಅಡಕೆಯಿಂದ ಉಪ್ಪಿನಕಾಯಿ, ಅಗರ ಬತ್ತಿ, ಬಟ್ಟೆ ತಯಾರಿಕೆ, ಅಡಕೆ ಟೀ ಹೀಗೆ ನಾನಾ ಉಪ ಉತ್ಪನ್ನಗಳನ್ನು ಮಾಡಲಾಗುತ್ತದೆ. ಅಡಕೆಯಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಮೂಲಕ ಅಡಕೆ ಎಂಬುದು ಗುಡ್ ಕಾಸ್‌ಗೆ ಬಳಕೆಯಾಗಬೇಕು. ಈ ಮೂಲಕ ಅಡಕೆಗೆ ಒಳ್ಳೆಯ ಮರ್ಯಾದೆಯೂ ಸಿಗುವಂತಾಗಲಿ ಎಂದು ಹೇಳಿದರು.
ಮಂಗಳೂರಿನ ಕ್ಯಾಂಪ್ಕೋ ಅಧ್ಯಕ್ಷ ಕಿಶೋರಕುಮಾರ ಕೊಡ್ಗಿ ಮಾತನಾಡಿ, ಅಡಕೆಯಿಂದ ಉತ್ತಮ ಬೆಲೆ ನಿರೀಕ್ಷಿಸುವುದಾದರೆ ಅದರ ಗುಣಮಟ್ಟವನ್ನು ನಿರಂತರ ಕಾಯ್ದುಕೊಳ್ಳಬೇಕು. ಗುಣಮಟ್ಟ ಇಲ್ಲದಿದ್ದರೆ ಅಡಕೆಗೆ ಬೆಲೆ ಸಿಗುವುದಿಲ್ಲ. ಅಡಕೆಗೆ ಗುಣಮಟ್ಟ ಇಲ್ಲವಾದರೆ ಅದು ಜನಾರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಉತ್ತಮ ಬೆಳವಣಿಗೆಯಲ್ಲ. ಇಂತಹದ್ದನ್ನು ಕ್ಯಾಂಪ್ಕೋ ಸಹ ಒಪ್ಪುವುದಿಲ್ಲ. ಹಾಗಾಗಿ, ಬೆಳೆಗಾರರು ಅಡಕೆ ಗುಣಮಟ್ಟವನ್ನು ನಿರಂತರ ಕಾಯ್ದುಕೊಳ್ಳಬೇಕು. ಕ್ಯಾಂಪ್ಕೋ, ತುಮ್ಕೋಸ್, ದಾಮ್ಕೋಸ್‌ನಂತಹ ಸಂಸ್ಥೆಗಳ ಸಲಹೆಗಳನ್ನು ಬೆಳೆಗಾರರು ಪಡೆಯಬೇಕು ಎಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಅಡಕೆಯಿಂದ ಕ್ಯಾನ್ಸರ್ ರೋಗ ಬರುವುದಿಲ್ಲ. ನಾನೊಬ್ಬ ದಂತ ವೈದ್ಯೆಯಾಗಿ ಈ ಮಾತು ಹೇಳುತ್ತಿದ್ದೇನೆ. ಆದರೆ, ಅಡಕೆಗೆ ಮಿಶ್ರಣ ಮಾಡುವ ರಾಸಾಯನಿಕಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ದಾವಣಗೆರೆ ತಾಲೂಕಿನಲ್ಲಿ 20 ಸಾವಿರಕ್ಕೂ ಅಧಿಕ ಅಡಕೆ ಬೆಳೆಗಾರರಿದ್ದಾರೆ. ಆದರೆ, ದಾಮ್ಕೋಸ್‌ನಲ್ಲಿ ಕೇವಲ 1400 ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಲಿ. ನಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವಾಗ ನಮ್ಮ ಸಂಖ್ಯಾಬಲ ಬೇಕಾಗುತ್ತದೆ. ಹಾಗಾಗಿ, ದಾಮ್ಕೋಸ್‌ನಲ್ಲಿ ಅಡಕೆ ಬೆಳೆಗಾರರು ಸದಸ್ಯತ್ವ ಪಡೆಯಲು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
- - -
- ಕಿಶೋರಕುಮಾರ ಕೊಡ್ಗಿ, ಅಧ್ಯಕ್ಷ, ಕ್ಯಾಂಪ್ಕೋ, ಮಂಗಳೂರು
ದಾವಣಗೆರೆಯಲ್ಲಿ ದಾಮ್ಕೋಸ್ ರಜತ ಮಹೋತ್ಸವ ಸಮಾರಂಭದಲ್ಲಿ ಸಿರಿಗೆರೆ ಶ್ರೀಗಳು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕುಮಾರ ಕೂಡ್ಗಿ, ದಾಸ್ಕೋಸ್ ಅಧ್ಯಕ್ಷ ಬಿ.ಕೆ.ಶಿವಕುಮಾರ ಇತರರು ಸಂಸ್ಥೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. -20ಕೆಡಿವಿಜಿ2: