ಬೆಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತಂತೆ ವಿವರಣೆ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಅವರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಮಂಗಳವಾರ ಸಂಜೆ ಭೇಟಿ ಮಾಡಲು ನಿತಿನ್ ನವೀನ್ ಅವರು ಸಮಯ ನೀಡಿದ್ದು, ರಾಜ್ಯದ ಉಭಯ ನಾಯಕರು ಸೋಮವಾರ ಸಂಜೆ ಅಥವಾ ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯೇಂದ್ರ ಸಂಪರ್ಕಿಸಿ ಅಡ್ಡಮತದಾನ ಬಗ್ಗೆ ವಿಚಾರಿಸಿದ ನಿತಿನ್
ಶುಕ್ರವಾರ ಬೆಳಗ್ಗೆ ನಿತಿನ್ ನವೀನ್ ಅವರು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಸಂಪರ್ಕಿಸಿ ಅಡ್ಡಮತದಾನ ಬಗ್ಗೆ ವಿಚಾರಿಸಿದರು. ಆ ವೇಳೆ ದೆಹಲಿಗೆ ಬಂದು ಖುದ್ದಾಗಿ ವಿವರಣೆ ನೀಡಲು ಭೇಟಿಗೆ ಸಮಯಾವಕಾಶ ನೀಡುವಂತೆ ವಿಜಯೇಂದ್ರ ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನಿತಿನ್ ನವೀನ್ ಅವರು ಸಂಜೆ ಹೊತ್ತಿಗೆ ತಮ್ಮ ಆಪ್ತ ಸಹಾಯಕರ ಮೂಲಕ ಮಂಗಳವಾರ ಆಗಮಿಸುವಂತೆ ರಾಜ್ಯದ ನಾಯಕರಿಗೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಯಾರು ಅಡ್ಡ ಮತದಾನ ಮಾಡಿ ಆಟ ಆಡಿರಬಹುದು ಎಂಬ ಮಾಹಿತಿ ಸಿಕ್ಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಲು ಭೇಟಿ ಮಾಡಲು ಅವಕಾಶಕ್ಕೆ ಮನವಿ ಮಾಡಿದ್ದೇನೆ. ಅವರು ಯಾವಾಗ ಅವಕಾಶ ಕೊಟ್ಟರೂ ಭೇಟಿ ಮಾಡಿ ವಿವರ ನೀಡಲಿದ್ದೇನೆ ಎಂದು ವಿವರಿಸಿದರು.
- ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ನ 11 ಶಾಸಕರಿಂದ ಅಡ್ಡಮತದಾನ
- ಶುಕ್ರವಾರ ಬೆಳಗ್ಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಕರೆ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನವೀನ್
- ದೆಹಲಿಗೆ ಬಂದು ಖುದ್ದಾಗಿ ಅಡ್ಡಮತದಾನ ಕುರಿತು ವಿವರಣೆ ನೀಡಲು ಸಮಯಾವಕಾಶ ನೀಡುವಂತೆ ಮನವಿ ಮಾಡಿದ ವಿಜಯೇಂದ್ರ
- ಶುಕ್ರವಾರ ಸಂಜೆ ಹೊತ್ತಿಗೆ ನಿತಿನ್ ಆಪ್ತ ಸಹಾಯಕರಿಂದ ವಿಜಯೇಂದ್ರಗೆ ಕರೆ. ಮಂಗಳವಾರ ಭೇಟಿಯಾಗುವಂತೆ ಸಂದೇಶ
- ಸೋಮವಾರ ಸಂಜೆ ಪ್ರತಿಪಕ್ಷ ನಾಯಕ ಅಶೋಕ್ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ದೆಹಲಿಗೆ ಪ್ರಯಾಣಿಸುವ ಸಂಭವ
