ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆಲವೇ ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ಸಿಗೆ ತೀವ್ರ ಪೈಪೋಟಿಯೊಡ್ಡಿ, ಸೋಲು ಅನುಭವಿಸಿದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ನಿವಾಸಕ್ಕೆ ಮಂಗಳವಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಶ್ರೀನಿವಾಸ ಮತ್ತು ಕುಟುಂಬ ವರ್ಗಕ್ಕೆ ಧೈರ್ಯ ತುಂಬಿದ್ದಾರೆ.

- ಚುನಾವಣೆ ಸೋಲಿನಿಂದ ಎದೆಗುಂದಬೇಕಾಗಿಲ್ಲ ಎಂದು ಕುಟುಂಬಕ್ಕೆ ಧೈರ್ಯ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆಲವೇ ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ಸಿಗೆ ತೀವ್ರ ಪೈಪೋಟಿಯೊಡ್ಡಿ, ಸೋಲು ಅನುಭವಿಸಿದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ನಿವಾಸಕ್ಕೆ ಮಂಗಳವಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಶ್ರೀನಿವಾಸ ಮತ್ತು ಕುಟುಂಬ ವರ್ಗಕ್ಕೆ ಧೈರ್ಯ ತುಂಬಿದರು.

ನಗರದಲ್ಲಿ ಶ್ರೀನಿವಾಸ ದಾಸಕರಿಯಪ್ಪ ನಿವಾಸಕ್ಕೆ ಸಂಜೆ ಭೇಟಿ ನೀಡಿದ ಬಿ.ವೈ.ವಿಜಯೇಂದ್ರ, ಪಕ್ಷದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಭುಜವನ್ನು ತಟ್ಟಿ, ಧೈರ್ಯ ತುಂಬಿದರು. ಕುಟುಂಬದ ಸದಸ್ಯರೆಲ್ಲರಿಗೂ ಧೈರ್ಯ ತುಂಬಿ, ಶ್ರೀನಿವಾಸಗೆ ರಾಜಕೀಯದಲ್ಲಿ ಮುಂದೆ ಉಜ್ವಲ ಭವಿಷ್ಯವಿದೆಯೆಂದು ಆತ್ಮವಿಶ್ವಾಸ ಮೂಡಿಸಿದರು.

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ ಆಗಿರುತ್ತದೆ. ಕಡಿಮೆ ಅಂತರದಲ್ಲಿ ಸೋಲನುಭವಿಸಿದ್ದು, ನಮ್ಮ ನಿರೀಕ್ಷೆಯಂತೆ ಕನಿಷ್ಠ 70 ಸಾವಿರ ಮತಗಳಾಗಿತ್ತು. ಆದರೆ, ಸುಮಾರು 63870 ಮತ ಪಡೆದಿದ್ದಾರೆ. ಈ ಸೋಲಿನಿಂದ ಎದೆಗುಂದಬೇಡಿ. ಪಕ್ಷ ಹಾಗೂ ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ಎಲ್ಲವನ್ನೂ ಮರೆತು, ಮತ್ತೆ ಪಕ್ಷ ಸಂಘಟನೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ತೊಡಗಿಕೊಳ್ಳಿ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಿ.ಸಿ. ಶ್ರೀನಿವಾಸ ಭಟ್, ದೊಗ್ಗಳ್ಳಿ ವೀರೇಶ, ಧನಂಜಯ ಕಡ್ಲೇಬಾಳು, ಶ್ರೀಮತಿ ದಾಸಕರಿಯಪ್ಪ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬ ವರ್ಗ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

- - -

(ಬಾಕ್ಸ್‌)

* ಸೋಲನ್ನು ತಲೆಗಿಟ್ಟುಕೊಳ್ಳದೇ, ಪಕ್ಷ ಸಂಘಟಿಸೋಣ

- ಸಿದ್ದೇಶಣ್ಣ, ರೇಣುಕಾಚಾರ್ಯ ಎಲ್ಲರೂ ಒಟ್ಟಾಗಿ ಬಿಜೆಪಿಗೆ ಗತವೈಭವ ತರೋಣ: ವಿಜಯೇಂದ್ರ ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶ್ರೀನಿವಾಸ ದಾಸಕರಿಯಪ್ಪಗೆ ಹಿನ್ನಡೆ ಆಗಿದೆಯೆಂದು ತಲೆಯಲ್ಲಿಟ್ಟುಕೊಳ್ಳದೇ, ಜಿಲ್ಲೆ, ಕ್ಷೇತ್ರಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರ ಸತತ ಪರಿಶ್ರಮದಿಂದ ಸುಮಾರು 64 ಸಾವಿರ ಮತಗಳ ಸಮೀಪ ಮತ ಪಡೆದಿದ್ದೇವೆ. ಈ ಸೋಲಿಗೆ ಎದೆಗುಂದದೆ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡೋಣ ಎಂದರು.

ಎಲ್ಲಾ ಸಮಸ್ಯೆ, ವ್ಯತ್ಯಾಸಗಳನ್ನು ಬದಿಗಿಟ್ಟು, ಜಿ.ಎಂ. ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಯಶವಂತ ರಾವ್ ಜಾಧವ್, ರಾಜಶೇಖರ ನಾಗಪ್ಪ ಎಲ್ಲರನ್ನೂ ಒಳಗೊಂಡಂತೆ ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡೋಣ ಎಂದು ಅವರು ಮನವಿ ಮಾಡಿದರು.

ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ನಾವೆಲ್ಲಾ ಒಟ್ಟಾಗಿ, ಒಂದಾಗಿ ಬಿಜೆಪಿಗೆ ಗತವೈಭವ ಮರು ಸ್ಥಾಪನೆಯಾಗುವಂತೆ ಶ್ರಮ ಹಾಕುತ್ತೇವೆ. ಶ್ರೀನಿವಾಸ ದಾಸಕರಿಯಪ್ಪ, ಬಿ.ಜಿ. ಅಜಯಕುಮಾರ ಈ ಎಲ್ಲರ ರಾಜಕೀಯ ಭವಿಷ್ಯ ಉಜ್ವಲವಾಗಿದೆ. ನಮಗೆ ಒಳ್ಳೆಯ ಕಾರ್ಯಕರ್ತರನ್ನು ಗುರುತಿಸಿ, ಶಕ್ತಿ ತುಂಬುವ ಜವಾಬ್ಧಾರಿ, ಕರ್ತವ್ಯ ನನಗಿದೆ. ಖಂಡಿತಾ ಆ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.

ದಕ್ಷಿಣ ಕ್ಷೇತ್ರದ ಸೋಲಿನಿಂದ ಯಾರೂ ಹತಾಶರಾಗಬೇಕಾಗಿಲ್ಲ. ಬಿ.ಎಸ್.ಯಡಿಯೂರಪ್ಪ ಅನೇಕ ಸವಾಲು, ಹೋರಾಟಗಳನ್ನು ಮಾಡಿದ್ದಾರೆ. ಇಂತಹ ಸವಾಲುಗಳನ್ನು ಗಟ್ಟಿಯಾಗಿ ನಿಂತು ಎದುರಿಸಿದ್ದಾರೆ. ಅದೇ ಯಡಿಯೂರಪ್ಪನವರ ಮಗನಾಗಿ, ರಾಜ್ಯಾಧ್ಯಕ್ಷನಾಗಿ ಇಟ್ಟ ಗುರಿ, ಮುಂದಿಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ. ಮತ್ತೆ ಬಿಜೆಪಿಗೆ ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಗತವೈಭವವನ್ನು ತಂದು, ಬಿಜೆಪಿಯನ್ನು ಮರು ಪ್ರತಿಷ್ಟಾಪನೆಯನ್ನು ಎಲ್ಲಾ ಹಿರಿಯರ ಆಶೀರ್ವಾದ, ಮಾರ್ಗದರ್ಶನದಿಂದ ಮಾಡುತ್ತೇವೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

- - -