ಹೊಸಪೇಟೆ: ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಿಂದ ಉಂಟಾಗಿರುವ ತೊಂದರೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದರೆ ಸಾಕು, ಮುಂದಿನ ದಿನಗಳಲ್ಲಿ ಬಿಜೆಪಿಗೆ ಯಶಸ್ಸು ಸಿಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ತಾಲೂಕಿನ ಕಮಲಾಪುರದಲ್ಲಿ ಗುರುವಾರ ಜಿಲ್ಲಾ ಮಟ್ಟದ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಅವರು ಮಾತನಾಡಿದರು. ಗ್ಯಾರಂಟಿ ಜನ ಕಾಂಗ್ರೆಸ್‌ಗೆ ಮತ್ತೆ ಮತ ಹಾಕುತ್ತಾರೆ ಎಂಬ ಭಯ ಬೇಡ, ಗ್ಯಾರಂಟಿಯಿಂದ ಜನರಿಗೆ ಬಹಳಷ್ಟು ತೊಂದರೆ ಉಂಟಾಗಿದ್ದು, ಅದನ್ನು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಿ, ಅದುವೇ ಪಕ್ಷಕ್ಕೆ ಯಶಸ್ಸು ತಂದುಕೊಡುತ್ತದೆ ಎಂದರು.ಗ್ಯಾರಂಟಿಯಿಂದ ಖಜಾನೆ ಖಾಲಿಯಾಗಿದೆ. ಯಾವ ಯಾವುದೋ ಮೂಲದಿಂದ ಹಣ ಸಂಪಾದಿಸಲು ಸರ್ಕಾರ ಹೊರಟಿದೆ. ದಿನಸಿ ಅಂಗಡಿಯಲ್ಲೂ ಮದ್ಯ ಮಾರಾಟಕ್ಕೆ ಮುಂದಾಗಿದೆ. ಭಾರಿ ಲಂಚ ಕೊಟ್ಟರಷ್ಟೇ ಉದ್ಯೋಗ, ವರ್ಗಾವಣೆ ಎಂಬಂತಹ ಸ್ಥಿತಿ ಇದೆ. ಎಲ್ಲದರಲ್ಲೂ ಪಾಲು ಪಡೆಯುತ್ತ, ಗ್ಯಾರಂಟಿ ಯೋಜನೆಯಿಂದ ಆಗಿರುವ ನಷ್ಟ ಸರಿಪಡಿಸುವ ಪ್ರಯತ್ನದಲ್ಲಿದೆ ಸರ್ಕಾರ. ಇದು ಜನಸಾಮಾನ್ಯರ ಮೇಲೆ ಭಾರಿ ಹೊಡೆತ ನೀಡಿದೆ. ಇದನ್ನು ಜನರಿಗೆ ತಿಳಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದರು.
ಅಹಿಂದ ಹೆಸರಿನಲ್ಲಿ ಶೋಷಿತ ವರ್ಗಕ್ಕೆ ಬಹಳ ಅನ್ಯಾಯ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆಗೆ ಬಳಸಿದ್ದಾರೆ. ಸರ್ಕಾರದ ಈ ಹಗರಣ ಜನರಿಗೆ ಸರ್ಕಾರ ಮಾಡಿದ ಮೋಸದ ಜ್ವಲಂತ ನಿದರ್ಶನ. ಗೃಹಲಕ್ಷ್ಮಿ ಹಣ ಕೊಟ್ಟು, ಪತ್ನಿಯ ಹಣ ಪಡೆದು ಹೆಂಡಕ್ಕೆ ಹಾಕುವ ಸ್ಥಿತಿ ಇದೆ. ಯುವನಿಧಿಯನ್ನು ಮರೆತೇಬಿಟ್ಟಿದ್ದಾರೆ. ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಸರ್ಕಾರದ ನಿಜ ಬಣ್ಣವನ್ನು ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಬಿಜೆಪಿ ವತಿಯಿಂದ ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು. ಶಾಸಕ ಕೃಷ್ಣ ನಾಯ್ಕ್, ಎಂಎಲ್‌ಸಿ ಹೇಮಲತಾ ನಾಯಕ್, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಕರುಣಾಕರ ರೆಡ್ಡಿ, ಪಕ್ಷದ ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಬಂಗಾರು ಹನುಮಂತು, ಬಲ್ಲಹುಣಸಿ ರಾಮಣ್ಣ, ವಿ. ಕನಕಪ್ಪ, ಜೋಗಿ ಹನುಮಂತಪ್ಪ, ನವೀನ್ ಕುಮಾರ್, ಬೆಣಗಲ್ಲು ಪ್ರಕಾಶ್, ಎಸ್. ಸಂಜೀವ ರೆಡ್ಡಿ, ಚೆನ್ನಬಸವನಗೌಡ ಪಾಟೀಲ್, ಕೆ.ಎಸ್. ರಾಘವೇಂದ್ರ ಉಪಸ್ಥಿತರಿದ್ದರು.