ಬಸವನಬಾಗೇವಾಡಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ದಿನಾಚರಣೆಯ ಜಾಗೃತಿ ಕಾರ್ಯಕ್ರಮ ಮಂಗಳವಾರ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದಲ್ಲಿ ಪೊಲೀಸ್ ಇಲಾಖೆ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ದಿನಾಚರಣೆಯ ಜಾಗೃತಿ ಕಾರ್ಯಕ್ರಮ ಮಂಗಳವಾರ ಆಯೋಜಿಸಲಾಗಿತ್ತು.
ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ನ್ಯಾಯಾಧೀಶರಾದ ಅಮಿತ ಘಟ್ಟಿ, ಈರಪ್ಪ ಢವಳೇಶ್ವರ, ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಚಾಲನೆ ನೀಡಿದರು.
ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭವಾದ ಜಾಗೃತಿ ಜಾಥಾ ವಿಠ್ಠಲ ಮಂದಿರ, ಬಸವಜನ್ಮ ಸ್ಮಾರಕ, ಗ್ರಾಮದೇವತೆ ದೇವಸ್ಥಾನ ಮಾರ್ಗ, ಅಗಸಿ ಮಾರ್ಗವಾಗಿ ತೆರಳಿ ಬಸವೇಶ್ವರ ವೃತ್ತದಲ್ಲಿ ಮುಕ್ತಾಯವಾಯಿತು.
ಬಸವೇಶ್ವರ ವೃತ್ತದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಯುವಜನಾಂಗ ಮಾದಕ ವ್ಯಸನದ ಜಾಲಕ್ಕೆ ಬೀಳದಂತೆ ತಡೆಯುವ ಕುರಿತು ಜಾಗೃತಿ ಮೂಡಿಸುವುದು ತುಂಬಾ ಅಗತ್ಯವಿದೆ. ಇಂದು ಯುವಜನಾಂಗ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವದು ವಿಷಾದಕರ ಸಂಗತಿ. ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವ ಮೂಲಕ ಯುವ ಜನಾಂಗ ದೇಶದ ಅಭಿವೃದ್ಧಿಗೆ ಜೊತೆಯಾಗಿ ನಿಲ್ಲಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯುವಜನಾಂಗ ಮಾದಕ ವ್ಯಸನಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಮಾತನಾಡಿ, ಮನುಕುಲದ ಉತ್ತಮ ಭವಿಷ್ಯಕ್ಕಾಗಿ ಮಾದಕ ವ್ಯಸನ ಮತ್ತು ಕಳ್ಳಸಾಗಣೆ ನಿಲ್ಲಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಮಾದಕ ವ್ಯಸನದ ಹೊರತಾಗಿ ವಿವಿಧ ವ್ಯಸನಗಳ ಕುರಿತು ಜಾಗೃತಿ ವಹಿಸುವುದು ತುಂಬಾ ಮುಖ್ಯವಾಗಿದೆ. ಮಾದಕ ದ್ರವ್ಯ ಮತ್ತು ಅಕ್ರಮ ಸಾಗಣೆ ಮಾಡುವವರ ಮೇಲೆ ಕಠಿಣ ಕಾನೂನುಗಳಿವೆ. ಮಾದಕ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವದು ತುಂಬಾ ಮುಖ್ಯವಾಗಿದೆ. ಯಾರಾದರೂ ಅಕ್ರಮವಾಗಿ ಸಾಗಣೆ ಮಾದಕ ದ್ರವ್ಯ ಸೇವನೆ ಮಾಡುವವರು ಕಂಡುಬಂದರೆ ಇಲಾಖೆಯು ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. ಪಿಐ ಗುರುಶಾಂತ ದಾಶ್ಯಾಳ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಜಾಥಾದಲ್ಲಿ ಮುಖಂಡರಾದ ಬಸವರಾಜ ಗೊಳಸಂಗಿ,ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ಜಗದೀಶ ಕೊಟ್ರಶೆಟ್ಟಿ, ಜಗದೇವಿ ಗುಂಡಳ್ಳಿ, ಎಂ.ಜಿ.ಆದಿಗೊಂಡ, ಬಸಣ್ಣ ದೇಸಾಯಿ, ಸುನೀಲ ನಾಯಕ, ಎಸ್.ಎ.ದೇಗಿನಾಳ, ಪ್ರಭು ಪಟ್ಟಣಶೆಟ್ಟಿ, ಸೇರಿದಂತೆ ಸ್ಥಳೀಯ ಬಿ.ಎಲ್.ಡಿ.ಇ.ಸಂಸ್ಥೆಯ ಔಷಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು, ಬಸವೇಶ್ವರ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳು, ಅಕ್ಕನಾಗಮ್ಮ ಪಪೂ ಕಾಲೇಜಿನ ವಿದ್ಯಾರ್ಥಿಗಳು, ಬಸವ ಪಪೂ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ಪ್ರಥಮ ಕಾಲೇಜಿನ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ಶಿಕ್ಷಕರು, ಸರ್ಕಾರಿ, ಖಾಸಗಿ ವೈದ್ಯರು, ಔಷಧ ವ್ಯಾಪಾರಸ್ಥರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.