ಕನನ್ಡಪ್ರಭ ವಾರ್ತೆ ಹುನಗುಂದ
ತಾಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ಮೂಲಸೌಲಭ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಸೋಮವಾರ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಭೇಟಿ ನೀಡಿದರು.ಕಳೆದ 48 ದಿನಗಳಿಂದ ಸಂತ್ರಸ್ತರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಗ್ರಾಮದ ಸಂತ್ರಸ್ತರ ಪರಿಸ್ಥಿತಿ ಚಿಂತಾಜನಕವಾಗಿದೆ. ನಾನೂ ಒಬ್ಬ ಸಂತ್ರಸ್ತನಾಗಿ ನಿಮ್ಮಲ್ಲಿಗೆ ಬಂದಿರುವೆ. ಕಳೆದ 18 ವರ್ಷಗಳಿಂದ ಅನುಭವಿಸುತ್ತಿರುವ ಸಂಕಷ್ಟ ಯಾರಿಗೂ ಬೇಡ. ಮನೆ, ಆಸ್ತಿ ಕಳೆದುಕೊಂಡ ನೀವು ನಿಮ್ಮ ಬೇಡಿಕೆಗಳಿಗೆ ಹೋರಾಡುವಂತಾಗಿದೆ. ಒಂದು ಗುಂಟೆ ಜಾಗದ ಬದಲಿ ನಾಲ್ಕು ಗುಂಟೆ ನೀಡಿ ಎನ್ನುವ ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. ದಪ್ಪ ಚರ್ಮದ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲದಂತಾಗಿದೆ. ಎಚ್ಚರಿಸುವ ಕೆಲಸ ಆಗಬೇಕಿದೆ ಎಂದರು.
ಮುಂಬರುವ ಅಧಿವೇಶನದಲ್ಲಿ ಸಂತ್ರಸ್ತರ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ. ತುರ್ತಾಗಿ ಅಧಿಕಾರಿಗಳೊಂದಿಗೆ ಮಾತನಾಡುವೆ. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆಯುವೆ. ಸ್ಥಳೀಯ ಜನ ಪ್ರತಿನಿಧಿಗಳೊಂದಿಗೆ ಸೇರಿಕೊಂಡು ನಿಮ್ಮ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನಿಸುವೆ. ನಿಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಧರಣಿ ಹಾಗೂ ಹೋರಾಟ ಮುಂದುವರಿಯಲಿ. ಮುಂಬರುವ ದಿನಗಳಲ್ಲಿ ನಾನೂ ಧರಣಿಯಲ್ಲಿ ಪಾಲ್ಗೊಳ್ಳುವೆ ಎಂದು ಹೇಳಿದರು.ಮುಖಂಡ ಡಾ.ಮಾಹಾಂತೇಶ ಕಡಪಟ್ಟಿ ಮಾತನಾಡಿ, ಸಂತ್ರಸ್ತರ ಬೇಡಿಕೆಗಳನ್ನು ಸರ್ಕಾರ ಅತಿ ಬೇಗ ಈಡೇರಿಸಿ ಅನುಕೂಲ ಮಾಡಿಕೊಡಬೇಕು ಎಂದರು.
ಮುಖಂಡ ಹಸನ್ ಪಿಂಜಾರ ಹಾಗೂ ಗ್ರಾಮದ ಸಂತ್ರಸ್ತರು ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರಿಗೆ ಸಲ್ಲಿಸಿದರು.
ಮುಖಂಡರಾದ ಬಸವರಾಜ ಬಡ್ಡಿ, ಅಜ್ಜಪ್ಪ ನಾಡಗೌಡ, ಮಹಾಂತೇಶ ನಾಡಗೌಡ, ಸಂಗಣ್ಣ ಹೊಸೂರ, ಕಲ್ಲಪ್ಪ ಆನೆಹೊಸೂರ, ಭೀಮಣ್ಣ, ಅಡಿಹಾಳ, ಸರೋಜಮ್ಮ ಹಿರೇಮಠ, ಮೀನಾಕ್ಷಿ ಗಂಜಿಹಾಳ ಇತರರಿದ್ದರು.