ಕನ್ನಡಪ್ರಭ ವಾರ್ತೆ ಅಥಣಿ
ಪರಿಸರ ಮಾಲಿನ್ಯ ಹಾಗೂ ಹವಾಮಾನ ವೈಪರಿತ್ಯವನ್ನು ಎದುರಿಸಲು ಗಿಡಮರಗಳನ್ನು ಬಳಸುವುದು ಅನಿವಾರ್ಯವಾಗಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬನ ನಾಗರಿಕನ ಹೊಣೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ತಾಲೂಕಿನ ಕೊಕಟನೂರ ಗ್ರಾಮದ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ 2000 ಸಸಿಗಳನ್ನು ನೆಡುವ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗಿಡಮರಗಳನ್ನು ಹಚ್ಚುವುದು ಕೇವಲ ಪರಿಸರ ದಿನಾಚರಣೆ ಮತ್ತು ಫೋಟೋಗಳಿಗೆ ಸೀಮಿತವಾಗಬಾರದು.ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬ, ಸಂಘ ಸಂಸ್ಥೆಗಳ ವಾರ್ಷಿಕೋತ್ಸವ, ಇನ್ನಿತರ ಕಾರ್ಯಕ್ರಮಗಳ ಸವಿನೆನಪಿನಲ್ಲಿ ಗಿಡ,ಮರಗಳನ್ನು ಹಚ್ಚುವುದರಿಂದ ಪರಿಸರ ಸಂರಕ್ಷಣೆಗೆ ಪೂರಕವಾಗಲಿದೆ. ಮುಂದಿನ ಜನಾಂಗಕ್ಕೆ ಹಸಿರು ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಿಡಮರಗಳು ಈ ಪ್ರಕೃತಿಗೆ ಅಮೂಲ್ಯವಾದ ಕೊಡುಗೆಯಾಗಿದೆ ಎಂದರು.
ತಾಲೂಕಿನ ಪೂರ್ವಭಾಗದ ರೈತರ ಮಹತ್ವಕಾಂಕ್ಷಿಯ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿ ಕೊನೆ ಹಂತದಲ್ಲಿದ್ದು, ಬರುವ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿ ಅನೇಕ ಸಚಿವರನ್ನು ಕರೆಸಿ ಲೋಕಾರ್ಪಣೆ ಗೊಳಿಸಲಾಗುವುದು. ಈ ಪಶು ವೈದ್ಯಕೀಯ ಮಹಾವಿದ್ಯಾಲಯದ ಎದುರಿಗೆ 100 ಎಕರೆ ಜಮೀನಿನಲ್ಲಿ ಕೃಷಿ ಮಹಾವಿದ್ಯಾಲಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಗುವದು. ₹ 80 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.ಈ ವೇಳೆ ಕೆಪಿಸಿಸಿ ಸದಸ್ಯ ಶಾಮ ಪೂಜಾರಿ, ಮಹಾವಿದ್ಯಾಲಯದ ಡೀನ್ ಡಾ.ಗಂಗಾ ನಾಯಕ, ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಇರನಟ್ಟಿ, ಚಿಕ್ಕೋಡಿ ಸಹಾಯಕ ಅರಣ್ಯ ಅಧಿಕಾರಿ ಕೆಂಪಣ್ಣ ವರನೂರ, ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ರಾಕೇಶ್ ಅರ್ಜುನವಾಡ, ಎಂ.ಎಚ್.ತೇಲಿ, ಅಭಿಯಂತರು ಪ್ರವೀಣ ಪಾಟೀಲ,ಡಾ.ಲಕ್ಷ್ಮಣ ಜಾದವ, ಪ್ರಲ್ಹಾದ್ ಪೂಜಾರಿ, ಡಾ.ಶಿವನಗೌಡ ಪಾಟೀಲ, ಡಾ.ಭರತ್ ಭೂಷಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.