ಅರಣ್ಯ ಜತೆಗೆ ವನ್ಯಜೀವಿಗಳನ್ನೂ ರಕ್ಷಿಸಿ: ಶಾಸಕ ಆರ್.ವಿ. ದೇಶಪಾಂಡೆ

KannadaprabhaNewsNetwork | Published : Oct 5, 2024 1:31 AM

ಸಾರಾಂಶ

ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಅರಣ್ಯ ಸಂರಕ್ಷಣೆ ಆಗಲೇಬೇಕು.

ಜೋಯಿಡಾ: ಕಾಳಿ ಹುಲಿ ಯೋಜನಾ ಪ್ರದೇಶದ ಸಂರಕ್ಷಣೆ ಸ್ಥಳೀಯರ ಸಹಭಾಗಿತ್ವದಲ್ಲಿಯೇ ಆಗಿದೆ. ಇಲಾಖೆಯ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ ಎಂದು ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಕುಂಬಾರವಾಡದಲ್ಲಿ 70ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರಣ್ಯ ಸಂರಕ್ಷಣೆ ಜತೆಗೆ ವನ್ಯಜೀವಿಗಳನ್ನೂ ರಕ್ಷಿಸಬೇಕು. ಆ ಕೆಲಸ ಮಾಡಿದ ಕ್ಷೇತ್ರದ ಜನತೆಗೆ ಈ ಗೌರವ ಸಲ್ಲುತ್ತದೆ. ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಅರಣ್ಯ ಸಂರಕ್ಷಣೆ ಆಗಲೇಬೇಕು. ಅದು ಸ್ಥಳೀಯರ ನೆರವಿನಿಂದ ಆಗಿರುವ ಕಾರಣ ಇಲ್ಲಿ ಹುಲಿಗಳ ಸಂಖ್ಯೆ ಕೂಡ ಹೆಚ್ಚಿದೆ. ದೇಶದ 55 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ನಮ್ಮ ಕಾಳಿ ಹುಲಿ ಕಾಯ್ದಿಟ್ಟ ಅರಣ್ಯ ಮುಂಚೂಣಿಯಲ್ಲಿದೆ. ಶೇ. 90ರಷ್ಟು ಅರಣ್ಯ ಹೊಂದಿರುವುದು ನಮ್ಮ ಹೆಗ್ಗಳಿಕೆ. ಇಂಥ ಸಂಪದ್ಭರಿತ ಅರಣ್ಯ ಜಗತ್ತಿನಲ್ಲಿಯೇ ಇಲ್ಲ. ಹಾಗಾಗಿ ಮುಂದಿನ ಪೀಳಿಗೆಗಾಗಿ ಅರಣ್ಯ ಸಂರಕ್ಷಣೆ ಜತೆಗೆ ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಕೆನರಾ ವೃತ್ತ ಅರಣ್ಯ ಸಂರಕ್ಷಣಾ ಅಧಿಕಾರಿ ವಸಂತ ರೆಡ್ಡಿ ಮಾತನಾಡಿ, ಜೋಯಿಡಾದಲ್ಲಿರುವಂಥ ಕಾಡು ಪ್ರಪಂಚದಲ್ಲಿ ಎಲ್ಲಿಯೂ ಸಿಗುವುದಿಲ್ಲ. ಇದಕ್ಕೆಲ್ಲ ಕಾರಣ ಸ್ಥಳೀಯರು. ಹೀಗಾಗಿ ಸ್ಥಳೀಯರನ್ನು ಮನತುಂಬಿ ಅಭಿನಂದಿಸುತ್ತೇವೆ. ಸ್ವಯಂ ಎಂಬ ಸಂಸ್ಥೆಯನ್ನೂ ಪ್ರಾರಂಭಿಸಿ ಸ್ಥಳೀಯರಿಗೆ ಉದ್ಯೋಗಕ್ಕಾಗಿ ವಿವಿಧ ತರಬೇತಿ ನೀಡಲಾಗುತ್ತಿದೆ. ವನ್ಯಜೀವಿ ಇಲಾಖೆಯೊಂದಿಗೆ ಕೈಜೋಡಿಸಲು ಸ್ಥಳೀಯರನ್ನು ಪ್ರೇರೇಪಿಸುತ್ತಿದ್ದೇವೆ ಎಂದರು.

ಸಪ್ತಾಹದ ಅಂಗವಾಗಿ ಸ್ಥಳೀಯ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಳಿ ಹುಲಿ ನಿರ್ದೇಶಕ ನೀಲೇಶ್ ಶಿಂದೆ ಹಳಿಯಾಳ ಡಿಎಫ್‌ಒ ಪ್ರಶಾಂತ ಕುಮಾರ್, ಸ.ಅ. ಸಂರಕ್ಷಣಾಧಿಕಾರಿ ಗಿರೀಶ್ ಸಂಕ್ರಿ, ತಹಸೀಲ್ದಾರ್ ಮಂಜುನಾಥ ಮುನ್ನೊಳ್ಳಿ ಇಒ ಸಂತೋಷ ಎಕ್ಕಳ್ಳಿಕರ್, ಸಿಪಿಐ ಚಂದ್ರಶೇಖರ್ ಹರಿಹರ, ಗ್ರಾಮ ಪಂಚಾಯಿತಿ ಅಧ್ಯಕ್ಷ ದತ್ತಾ ನಾಯಕ್, ಮಂಜುನಾಥ ಮೊಕಾಶಿ ಅರುಣ ದೇಸಾಯಿ, ಅರುಣ ಭಗವತಿರಾಜ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಮಂಗೇಶ ಕಾಮತ ಇತರರು ಉಪಸ್ಥಿತರಿದ್ದರು.70ನೇ ವನ್ಯಜೀವಿ ಸಪ್ತಾಹಕ್ಕೆ ಚಾಲನೆ

ಜೋಯಿಡಾ: ಪಣ್ಸೋಲಿಯ ಕಾಳಿ ಹುಲಿ ಕಾಯ್ದಿಟ್ಟ ಅರಣ್ಯದಲ್ಲಿ 70ನೇ ವನ್ಯಜೀವಿ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಕಾಳಿ ಹುಲಿ ಯೋಜನಾ ನಿರ್ದೇಶಕ ನಿಲೇಶ್ ಶಿಂದೆ ಅವರು ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದ ಜನರ ಸಹಭಾಗಿತ್ವದಲ್ಲಿ ಯೋಜನೆಯ ಕಾರ್ಯಗಳು ನಡೆಯುತ್ತಿವೆ. ಜನರು ವನ್ಯಜೀವಿಗಳನ್ನೂ ತಮ್ಮ ಜೀವನದ ಅವಿಭಾಜ್ಯ ಅಂಗ ಎಂದು ತಿಳಿದು ರಕ್ಷಣೆಗೆ ಒತ್ತು ಕೊಡುತ್ತಿದ್ದಾರೆ. ಕಾಡುಪ್ರಾಣಿಗಳನ್ನು ರಕ್ಷಿಸುತ್ತ ಸೌಹಾರ್ದಯುತವಾಗಿ ಜೀವಿಸುತ್ತಿದ್ದಾರೆ. ಎಂದರುಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ ಮತ್ತು ಗಿರೀಶ್ ಎಸ್. ಮಾತನಾಡಿದರು. ವಲಯ ಅರಣ್ಯಾಧಿಕಾರಿಗಳಾದ ಮಹಾಂತೇಶ ಪಾಟೀಲ್, ನೀಲಕಂಠ ದೇಸಾಯಿ, ರವಿಕಿರಣ್ ಸಂಪಗಾವಿ, ಗಣರಾಜ್ ಪಟಗಾರ, ಗಣ್ಯರಾದ ನಂದು ತೇಲಿ, ಕೃಷ್ಣಾ ದೇಸಾಯಿ, ರೋಟರಿ ಅಧ್ಯಕ್ಷ ರಾಹುಲ್ ಬಾವಾಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತಾರಾಮ ಮಾರೇಕರ್, ಅಭಿವೃದ್ಧಿ ಅಧಿಕಾರಿ ಸುರೇಶ್ ಇತರರು ಇದ್ದರು.

Share this article