ಬಾಲ, ಜೀತ, ಕಾರ್ಮಿಕ ಪದ್ಧತಿ- ವಿಶ್ವ ಮಾನವ ಹಕ್ಕುಗಳ ದಿನದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಮೂಡಿಗೆರೆಪ್ರತಿಯೊಬ್ಬರೂ ಯಾವುದೇ ಕುಂದು ಕೊರತೆ ಇಲ್ಲದೇ ಜೀವನ ನಡೆಸಬೇಕು. ಜನರ ಘನತೆ, ಗೌರವ ಕಾಪಾಡುವುದು ಹಾಗೂ ರಕ್ಷಣೆ ನೀಡುವುದೇ ಮಾನವ ಹಕ್ಕು ಎಂದು ಜೆಎಂಎಫ್‌ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್ ಹೇಳಿದರು.
ಮಂಗಳವಾರ ಪಟ್ಟಣದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆ ವತಿಯಿಂದ ಏರ್ಪಡಿಸಿದ್ದ ಬಾಲ ಜೀತ ಕಾರ್ಮಿಕ ಪದ್ಧತಿ ಮತ್ತು ವಿಶ್ವ ಮಾನವ ಹಕ್ಕುಗಳ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ದೊರಕ ಬೇಕೆಂದು ಕಾನೂನು ಹೇಳುತ್ತದೆ. ಕೆಲಸಕ್ಕಾಗಿ ಮಕ್ಕಳನ್ನು ಬಳಸಿಕೊಂಡು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಪೋಷಕರ ಮೇಲೆಯೂ ಕೂಡ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಹಾಗಾಗಿ ಶಿಕ್ಷಣ ವಂಚಿತರಾಗುವ ಮಕ್ಕಳು ಕಂಡು ಬಂದರೆ ಅವರನ್ನು ಶಾಲೆಗೆ ಕರೆತರುವ ಕೆಲಸ ಮಾಡಬೇಕೆಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತರಾಜ್ ಮಾತನಾಡಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅದಕ್ಕಾಗಿ ಸರ್ಕಾರ ನೀಡುವ ಉಚಿತ ಶಿಕ್ಷಣ ಸೌಲಭ್ಯ ಎಲ್ಲಾ ಮಕ್ಕಳು ಪಡೆಯಬೇಕು. ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯ ಶಿಕ್ಷಕಿ ರೇಣುಕಾ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಡಿ.ಸಿದ್ದಯ್ಯ, ಕಾರ್ಯದರ್ಶಿ ಎಚ್.ಜಿ.ಆದರ್ಶ, ಉಪಾಧ್ಯಕ್ಷ ಬಿ.ಟಿ.ನಟರಾಜ್, ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ಎಚ್.ಕೆ.ಪ್ರಭಾಕರ್, ಸರಕಾರಿ ಸಹಾಯಕ ಅಭಿಯೋಜಕಿ ಆರ್.ರೇಣುಕಾ ಮತ್ತಿತರರಿದ್ದರು. ಫೋಟೊ12ಎಂಡಿಜಿ1ಎ :
ಮೂಡಿಗೆರೆ ಪಟ್ಟಣದ ಕಾಲೇಜಿನಲ್ಲಿ ಏರ್ಪಡಿಸಿದ್ದ ಬಾಲ ಜೀತ ಕಾರ್ಮಿಕ ಪದ್ಧತಿ ಮತ್ತು ವಿಶ್ವ ಮಾನವ ಹಕ್ಕುಗಳ ದಿನ ಕಾರ್ಯಕ್ರಮವನ್ನು ಜೆಎಂಎಫ್‌ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.