ಬಳ್ಳಾರಿ: ಭೂಮಿಯ ಮೇಲಿನ ಜೀವ ಸಂಕುಲದ ಉಳಿವಿನಲ್ಲಿ ಓಜೋನ್ ಪದರ ಪ್ರಮುಖ ಪಾತ್ರ ವಹಿಸುತ್ತಿದ್ದು, ಅದರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಾವೂರಿ ರಾಮಕೃಷ್ಣರೆಡ್ಡಿ ಹೇಳಿದರು.
ಸೂರ್ಯನಿಂದ ಹೊರಹೊಮ್ಮುವ ಹಾನಿಕಾರಕ ಅತಿನೇರಳೆ ಕಿರಣ ಹೀರಿಕೊಂಡು ಭೂಮಿಯ ಮೇಲಿನ ಜೀವಜಗತ್ತನ್ನು ರಕ್ಷಿಸುವಲ್ಲಿ ಓಜೋನ್ ಪದರ ಮಹತ್ವದ ಪಾತ್ರ ವಹಿಸುತ್ತದೆ. ಓಜೋನ್ ಪದರ ಕ್ಷೀಣಿಸುತ್ತಾ ಹೋದರೆ ಪರಿಸರ ಹಾಗೂ ಜೀವಜಗತ್ತಿನ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಓಜೋನ್ ಪದರದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಪ್ರತಿ ವರ್ಷ ಸೆ.16ರಂದು ವಿಶ್ವ ಓಜೋನ್ ದಿನ ಆಚರಿಸಲಾಗುತ್ತದೆ. ಓಜೋನ್ ಪದರ ಸಂರಕ್ಷಣೆಯ ಅಗತ್ಯ ಮನಗಂಡು 1987ರಲ್ಲಿ ಮಾಂಟ್ರಿಯಲ್ ಪ್ರೋಟೋಕಾಲ್ ಜಾರಿಗೆ ತರಲಾಯಿತು. ಮೋಟಾರು ವಾಹನಗಳ ಹೆಚ್ಚಳ, ಕೈಗಾರಿಕಾ ಮಾಲಿನ್ಯ ಹಾಗೂ ಏರ್ ಕಂಡೀಷನರ್‌ಗಳ ಅತಿಯಾದ ಬಳಕೆಯಿಂದ ಪರಿಸರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಯುವ ವಿಜ್ಞಾನಿ ಡಾ. ಕೆ.ಓಬಳರೆಡ್ಡಿ ಓಜೋನ್ ಪದರದ ಕುರಿತು ಪ್ರಬಂಧ ಮಂಡಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸಿದರು.
ಚಿನ್ಮಯಿ ಪ್ರಾರ್ಥಿಸಿದರು. ವೀಣಾ ಹಾಗೂ ಸ್ನೇಹಶ್ರೀ ನಿರೂಪಿಸಿದರು. ವಿದ್ಯಾರ್ಥಿನಿ ವರ್ಷ ವಂದಿಸಿದರು.