ಹುಲಿಗಳ ನೆಲೆಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆ: ವಿ.ತೇಜಸ್

KannadaprabhaNewsNetwork |  
Published : Apr 29, 2026, 01:45 AM IST
28ಕೆಎಂಎನ್ ಡಿ13 | Kannada Prabha

ಸಾರಾಂಶ

ಹುಲಿಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಕಷ್ಟು ವಿಫುಲ ಅವಕಾಶಗಳಿವೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಕಾಡಂಚಿನ ಗ್ರಾಮಗಳ ನಿವಾಸಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಒಗ್ಗೂಡಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಹುಲಿಗಳ ನೆಲೆಗಳ ಸಂರಕ್ಷಣೆ ಸಾಧ್ಯ.

ಕನ್ನಡಪ್ರಭ ವಾರ್ತೆ ಹಲಗೂರು

ದೇಶದಲ್ಲಿ ಅವನತಿಯ ಹಾದಿಯಲ್ಲಿರುವ ಹುಲಿಗಳ ಸಂತತಿಯನ್ನು ಮತ್ತೆ ಹೆಚ್ಚಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವನೋದಯ ಸ್ವಯಂ ಸೇವಾ ಸಂಸ್ಥೆ ಪ್ರಕೃತಿ ಶಿಕ್ಷಕ ವಿ.ತೇಜಸ್ ಅಭಿಪ್ರಾಯಪಟ್ಟರು.

ಹಲಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಿಂದ ಸಮೀಪದ ಬ್ಯಾಡರಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ವನ್ಯಜೀವಿ ಸಂರಕ್ಷಣೆಯಲ್ಲಿ ಹುಲಿ ಉಳಿಸುವ ದಾರಿ ಕುರಿತು ಉಪನ್ಯಾಸ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಮಾತನಾಡಿದರು.

ಹುಲಿಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಕಷ್ಟು ವಿಫುಲ ಅವಕಾಶಗಳಿವೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಕಾಡಂಚಿನ ಗ್ರಾಮಗಳ ನಿವಾಸಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಒಗ್ಗೂಡಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಹುಲಿಗಳ ನೆಲೆಗಳ ಸಂರಕ್ಷಣೆ ಸಾಧ್ಯ ಎಂದರು.

ಒಂದು ಕಾಡಿನಲ್ಲಿ ಹುಲಿ ಸಂತತಿ ವಾಸವಾಗಿದೆ ಎಂದರೆ ಆ ಕಾಡು ಸಮೃದ್ಧವಾಗಿದೆ ಎಂದರ್ಥ. ಹುಲಿಗಳ ಆಹಾರಕ್ಕಾಗಿ ವರ್ಷಕ್ಕೆ ಸುಮಾರು 50ಕ್ಕೂ ಹೆಚ್ಚು ಬಲಿ ಪ್ರಾಣಿಗಳು ಬೇಕಾಗಲಿವೆ. ಹುಲಿ ವಾಸಿಸುವ ಕಾಡಿನಲ್ಲಿ ಕಾಟಿ, ಜಿಂಕೆ, ಕೃಷ್ಣಾಮೃಗ, ಕಾಡು ಹಂದಿ ಸೇರಿದಂತೆ ಹಲವು ಬಗೆಯ ಬಲಿ ಪ್ರಾಣಿಗಳು ಸಮೃದ್ಧವಾಗಿ ಇದ್ದಾಗ ಮಾತ್ರ ಹುಲಿಗಳ ಸಂತತಿ ಹೆಚ್ಚಾಗಬಹುದು ಎಂದರು.

ವನೋದಯ ಸಂಸ್ಥೆ ಮಹೇಶ್ ಕುಮಾರ್ ಮಾತನಾಡಿ, ಮಾನವನ ದುರಾಸೆಯಿಂದಾಗಿ ಸಂರಕ್ಷಿತ ಕಾಡು ನಾಶವಾಗುತ್ತಿದೆ. ಹುಲಿಯ ನೆಲೆಗಳು ಅಪಾಯದ ಅಂಚಿಗೆ ತಲುಪುತ್ತಿವೆ. ಕಾಡಿನಲ್ಲಿರುವ ಹಂದಿ, ಜಿಂಕೆ ಮುಂತಾದ ಪ್ರಾಣಿಗಳನ್ನು ಕಳ್ಳ ಬೇಟೆಗಾರರು ಕೊಂದು ಹಾಕುತ್ತಿದ್ದಾರೆ. ದನಗಾಹಿಗಳು ಹಸುಗಳಿಗೆ ಹೊಸ ಹುಲ್ಲು ಚಿಗರಲಿ ಎಂದು ಕಾಡಿಗೆ ಬೆಂಕಿ ಹಾಕುತ್ತಿದ್ದಾರೆ. ಇದರಿಂದಾಗಿ ಕಾಡು ನಾಶದ ಜೊತೆಗೆ ಹಲವು ಬಗೆಯ ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಪರಿಣಾಮ ಹುಲಿಗಳು ದೈನಂದಿನ ಆಹಾರ ಕೊರತೆಯಿಂದ ಸಾವನ್ನಪ್ಪಲಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಶೇಖರ್ ದತ್ತಾತ್ರಿ ತಯಾರಿಸಿರುವ ಸುಮಾರು 45 ನಿಮಿಷಗಳ ಅವಧಿಯ ಹುಲಿಗಳ ಜೀವನ ಶೈಲಿ, ಹುಲಿಗಳು ಎದುರಿಸುತ್ತಿರುವ ಸಮಸ್ಯೆಗಳು ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಾಯಿತು. ಹುಲಿ ಜೀವನ ಕುರಿತು ಕುತೂಹಲಕಾರಿ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಪಡೆದುಕೊಂಡರು.

ಈ ವೇಳೆ ರಾಷ್ಟ್ರೀಯ ಸೇವಾ ಶಿಬಿರ ಅಧಿಕಾರಿ ಬಿ.ಸಿ.ರವಿ, ಉಪನ್ಯಾಸಜರಾದ ಎಂ.ಚೇತನಶ್ರೀ, ರಂಜನ್, ಭವ್ಯ ವನೋದಯ ಸಂಸ್ಥೆ ಸ್ವಯಂ ಸೇವಕ ಮಹೇಶ್ ಕುಮಾರ್, ಶಿವರಾಜು, ಮಾಯಪ್ಪ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒತ್ತಡ ನಿರ್ವಹಣೆಗೆ ವ್ಯಕ್ತಿತ್ವ ವಿಕಸನ ಪೂರಕ
ಕನ್ನಡ ಪಠ್ಯಪುಸ್ತಕ ಸರಳೀಕರಣಕ್ಕೆ ಇಲಾಖೆ ಚಿಂತನೆ