ದೊಡ್ಡಬಳ್ಳಾಪುರ: ವ್ಯಕ್ತಿತ್ವ ವಿಕಸನವು ಸಮಯದ ನಿರ್ವಹಣೆ ಮತ್ತು ಒತ್ತಡವನ್ನು ನಿಭಾಯಿಸುವ ಕಲೆಗಳನ್ನು ಕಲಿಸುತ್ತದೆ ಎಂದು ವ್ಯಕ್ತಿತ್ವ ನಿರ್ವಹಣೆ ತರಬೇತುದಾರ ಅಫ್ತಾಬ್‌ ತಿಳಿಸಿದರು.

ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಅಲೈಡ್‌ ಸೈನ್ಸಸ್‌ ವಿಭಾಗದಿಂದ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕುರಿತ ವಿದ್ಯಾರ್ಥಿ ಅಭಿವೃದ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವ್ಯಕ್ತಿತ್ವ ವಿಕಸನ ಎಂಬುದು ಕೇವಲ ಹೊರಗಿನ ರೂಪವನ್ನು ಸುಧಾರಿಸಿಕೊಳ್ಳುವುದು ಮಾತ್ರವಲ್ಲದೆ, ಒಬ್ಬ ವ್ಯಕ್ತಿಯ ಆಲೋಚನೆಗಳು, ನಡವಳಿಕೆ ಮತ್ತು ಸಂವಹನ ಕಲೆಗಳನ್ನು ಉತ್ತಮ ಪಡಿಸಿಕೊಳ್ಳುವ ನಿರಂತರ ಪ್ರಕ್ರಿಯೆಯಾಗಿದೆ ಎಂದರು.

ವ್ಯಕ್ತಿಯ ಸಾಮರ್ಥ್ಯಗಳ ಬಗ್ಗೆ ಅರಿವು ಮೂಡಿಸುವ ಪ್ರಕ್ರಿಯೆ ಅತ್ಯಂತ ಮುಖ್ಯ. ಇದು ಸವಾಲುಗಳನ್ನು ಎದುರಿಸುವ ಧೈರ್ಯವನ್ನು ನೀಡುವುದಲ್ಲದೆ, ಯಾವುದೇ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಪರಿಣಾಮಕಾರಿ ಸಂವಹನ ಕಲೆಗೂ ಇದು ಪೂರಕವಾಗಿರುತ್ತದೆ. ಬೇರೆಯವರೊಂದಿಗೆ ಹೇಗೆ ಮಾತನಾಡಬೇಕು, ಹೇಗೆ ಸ್ಪಂದಿಸಬೇಕು ಎಂಬುದು ವ್ಯಕ್ತಿತ್ವ ವಿಕಸನದ ಮುಖ್ಯ ಭಾಗ. ಇದು ವೃತ್ತಿಜೀವನದಲ್ಲಿ ಮತ್ತು ವೈಯಕ್ತಿಕ ಸಂಬಂಧಗಳಲ್ಲಿ ಯಶಸ್ಸು ತಂದುಕೊಡುತ್ತದೆ ಎಂದು ಹೇಳಿದರು.

ಜೀವನದ ಏರಿಳಿತಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಶಕ್ತಿಯನ್ನು ಇದು ನೀಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ದೂರವಿಟ್ಟು, ಕಷ್ಟದ ಸಮಯವನ್ನು ಎದುರಿಸಲು ಸಹಕಾರಿಯಾಗಿದೆ. ಇದು ಒಂದೇ ದಿನದಲ್ಲಿ ಆಗುವ ಬದಲಾವಣೆಯಲ್ಲ, ಇದು ಪ್ರತಿದಿನವೂ ನಮ್ಮನ್ನು ನಾವು ಸುಧಾರಿಸಿಕೊಳ್ಳುವ ಒಂದು ಪಯಣ ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಡಾ.ಪಿ.ವಿಜಯಕಾರ್ತಿಕ್‌ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ನಿರ್ದೇಶಕ ಡಾ.ಎಂ.ಶ್ರೀನಿವಾಸರೆಡ್ಡಿ, ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ, ಉಪಪ್ರಾಂಶುಪಾಲ ಡಾ.ಆರ್‌.ಎಂ.ಸುನಿಲ್‌ಕುಮಾರ್, ವಿಭಾಗ ಮುಖ್ಯಸ್ಥರಾದ ಡಾ.ಪ್ರಚಲಿತ್‌, ಡಾ.ಕೆ.ಸುನಿಲ್‌ಕುಮಾರ್‌, ಕಾರ್ಯಕ್ರಮ ಸಂಯೋಜಕ ಕೆ.ಆರ್.ರವಿಕಿರಣ್, ಉದ್ಯೋಗಾಧಿಕಾರಿ ಡಿ.ಎಸ್.ಕಾವ್ಯ, ಪ್ರಾಧ್ಯಾಪಕರಾದ ಎಚ್.ಮೀನಾಕ್ಷಿ, ವಿ.ಸುಜಾತ, ಎ.ಎಸ್.ಅಶೋಕ್‌, ಬಿ.ಆರ್.ಹೇಮಲತಾ, ಆರ್‌.ಅರುಣಾ, ಎಸ್.ಆರ್.ಕಾವ್ಯ, ಎನ್.ಆರ್.ಮಧು, ಎಸ್.ಆರ್.ರೇಷ್ಮಾ, ಎಸ್.ಶಿಲ್ಪ, ಡಿ.ಎನ್.ರೇಖಾ, ಕೆ.ಜಿ.ಗೋವಿಂದರಾಜು, ಆರ್.ಮುರಳಿ, ಕೆ.ಅನೂಷಾ, ಜೆ.ಸುಧಾ ಮತ್ತಿತರರು ಹಾಜರಿದ್ದರು.


27ಕೆಡಿಬಿಪಿ1-

ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಆಯೋಜಿಸಲಾಗಿತ್ತು.