ದೇಶದ್ರೋಹಿಗಳ ರಕ್ಷಣೆ, ಹಿಂದೂ, ದಲಿತರ ಶೋಷಣೆಯೇ ಸಾಧನೆ: ಬಿ.ವೈ. ವಿಜಯೇಂದ್ರ

KannadaprabhaNewsNetwork |  
Published : Mar 31, 2026, 03:15 AM IST
(ಫೋಟೊ30ಬಿಕೆಟಿ16,(1) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ  ಅವರು ಶಿರೂರ ಪಟ್ಟದಲ್ಲಿ ಮತಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು) | Kannada Prabha

ಸಾರಾಂಶ

ದೇಶದ್ರೋಹಿಗಳ ರಕ್ಷಣೆ, ಹಿಂದೂ ಮತ್ತು ದಲಿತರ ಶೋಷಣೆಗಳು ಕಾಂಗ್ರೆಸ್ ದುರಾಡಳಿತದ ಸಾಧನೆಯಾಗಿದೆ. ಭ್ರಷ್ಟಾಚಾರ ಮತ್ತು ಹಗರಣಗಳ ಸರದಾರರಾಗಿ ಬಾಗಲಕೋಟೆಯಲ್ಲಿ ಮತಕೇಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅದನ್ನು ಬುಡಸಮೇತ ಕಿತ್ತು ಹಾಕಿ ಭದ್ರತೆ ಮತ್ತು ಭರವಸೆಯ ಬಿಜೆಪಿ ಗೆಲ್ಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದ್ರೋಹಿಗಳ ರಕ್ಷಣೆ, ಹಿಂದೂ ಮತ್ತು ದಲಿತರ ಶೋಷಣೆಗಳು ಕಾಂಗ್ರೆಸ್ ದುರಾಡಳಿತದ ಸಾಧನೆಯಾಗಿದೆ. ಭ್ರಷ್ಟಾಚಾರ ಮತ್ತು ಹಗರಣಗಳ ಸರದಾರರಾಗಿ ಬಾಗಲಕೋಟೆಯಲ್ಲಿ ಮತಕೇಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅದನ್ನು ಬುಡಸಮೇತ ಕಿತ್ತು ಹಾಕಿ ಭದ್ರತೆ ಮತ್ತು ಭರವಸೆಯ ಬಿಜೆಪಿ ಗೆಲ್ಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಶಿರೂರ ಪಟ್ಟದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭ್ರಷ್ಟ ಆಡಳಿತಕ್ಕೆ ಹೆಸರಾದ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದಲ್ಲಿ ಒಂದೇ ಒಂದು ಸಮರ್ಪಕವಾದ ಯೋಜನೆ ನೀಡಲು ಸಾಧ್ಯವಾಗಿಲ್ಲ. ಮತದಾರರು ಇಟ್ಟುಕೊಂಡ ನಿರೀಕ್ಷೆಗಳನ್ನು ಮಣ್ಣು ಮಾಡಿದೆ. ಕಿಸಾನ್ ಸಮ್ಮಾನ ಯೋಜನೆ, ರೈತ ಮಿತ್ರ ಯೋಜನೆಗಳಂತಹ ರೈತ ಯೋಜನೆಗಳನ್ನು ಮಣ್ಣು ಮಾಡಿ ಅನ್ನದಾತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ಗ್ಯಾರಂಟಿಗಳಿಗೆ ಹಣ ಕೊಡಲಾಗದೇ ಅಬಕಾರಿ ಇಲಾಖೆಗೆ ಸುಂಕ ಏರಿಸಿ ಆಸ್ಪತ್ರೆಗಳಿಗಿಂತ ಹೆಚ್ಚು ಮದ್ಯದ ಅಂಗಡಿ ತೆರೆದಿದ್ದಾರೆ. ಬಡವರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ ಅಧಿಕಾರ ದಾಹಕ್ಕಾಗಿ ಬಡವರನ್ನೇ ಬಲಿ ಪಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭೀಕರ ಮಳೆ ಮತ್ತು ಪ್ರವಾಹದಿಂದ ಮನೆ ಕಳೆದುಕೊಂಡ ಸಾಮಾನ್ಯರಿಗೆ ಹೊಸ ಮನೆ ನಿರ್ಮಿಸಿಕೊಳ್ಳಲು ಬಿಎಸ್‌ವೈ ₹5 ಲಕ್ಷ ನೀಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಒಂದು ಮನೆ ನೀಡಲು ಸಾಧ್ಯವಾಗುತ್ತಿಲ್ಲ. ದಲಿತ ಮಹಿಳೆಯರ ಹತ್ಯೆಯಾದರೂ ಸಾಂತ್ವನ ಹೇಳುವ ಕೆಲಸವನ್ನು ಕಾಂಗ್ರೆಸ್ ಮಾಡಿಲ್ಲ, ಹಿಂದೂ ಮೆರವಣಿಗೆಯ ಮೇಲೆ ಕಲ್ಲು ಎಸೆಯುವ ಕ್ರೂರಿಗಳ ರಕ್ಷಣೆ ಮಾಡುತ್ತಿದ್ದಾರೆ. ದೇಶ ವಿರೋಧಿ ಘೋಷಣೆ ಕೂಗುವ ದೇಶದ್ರೋಹಿಗಳ ಪರವಾಗಿ ನಿಲ್ಲುತ್ತಿದೆ. ಬಾದಾಮಿ ಮುಖ್ಯಮಂತ್ರಿಗಳಿಗೆ ರಾಜಕೀಯದಲ್ಲಿ ಪುನರ್ಜನ್ಮ ನೀಡಿದರೂ ಬಾಗಲಕೋಟೆಗೆ ವಿಶೇಷ ಅನುದಾನ ಕೊಡದೇ ಈ ಭಾಗಕ್ಕೂ ಮಲತಾಯು ಧೋರಣೆ ಮಾಡಿದ್ದಾರೆ ಎಂದರು.ಎಲ್ಲದರಿಂದ ರೋಸಿಹೋದ ಜನತೆ ಕಾಂಗ್ರೆಸ್ ಅನ್ನು ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಿಂದ ಬುಡಸಮೇತ ಕಿತ್ತು ಹಾಕಲಿದ್ದಾರೆ. ಅದು ಬಾಗಲಕೋಟೆಯ ಉಪಚುನಾವಣೆಯಿಂದ ಪ್ರಾರಂಭವಾಗಲಿ ಚರಂತಿಮಠರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸಿ ಎಂದು ಕರೆ ನೀಡಿದರು.ವಿಧಾನ ಪರಿಷತ್ ಸದಸ್ಯ ಪಿ.ಎಚ್ ಪೂಜಾರ ಮಾತನಾಡಿ, ಮೂರು ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಸರಕಾರ ನಿರಾಶಾಭಾವ ಹುಟ್ಟಿಸುವ ಕೆಲಸವ ಮಾಡಿದೆ. ನೀರಾವರಿ ಮತ್ತು ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಮಾಡಿದ್ದು, ಶಿರೂರ ಗುಡ್ಡವನ್ನು ವಕ್ಫ್‌ ಆಸ್ತಿಯನ್ನಾಗಿ ಮಾಡಿ ಹಿಂದುಗಳಿಗೆ ಮೋಸ ಮಾಡಿದೆ. ಇತ್ತಕಡೆ ಪಪಂ ಚುಣಾವನೆ ಮಾಡದೇ ಅದರಲ್ಲೂ ಹಗರಣ ಮಾಡಲು ಮುಂದಾಗಿದೆ. ಅದಕ್ಕೆ ತಕ್ಕಪಾಠ ಕಲಿಸಲು ಬೆಜೆಪಿ ಗೆಲ್ಲಿಸಬೇಕು ಎಂದರು.

ಕುಷ್ಟಗಿ ಶಾಸಕ ದೊಡ್ಡಗೌಡ ಪಾಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಅನುಕಂಪ ಮತ್ತು ಹಣ ಮುಂದಿಟ್ಟುಕೊಂಡು ಉಪಚುನಾವಣೆಗೆ ಬಂದಿರುವ ಕಾಂಗ್ರೆಸ್‌ ಅಭಿವೃದ್ಧಿ ಶೂನ್ಯವಾಗಿದೆ. ಬಿಜೆಪಿ ಮಾಡಿದ ಕೆಲಸವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದು ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿ.ಶ್ರೀರಾಮುಲು ಮಾತನಾಡಿ, ಸಬ್ ಕಾ ಸಾಥ್‌ ಸಬ್ ಕಾ ವಿಕಾಸ ಧ್ಯೇಯವಾಕ್ಯದಡಿ ಎಲ್ಲರನ್ನು ವಿಕಸಿತರನ್ನಾಗಿಸುವ ಕೆಲಸ ಮೋದಿ ಮಾಡುತ್ತಿದ್ದು, ಶಿರೂರ ಗ್ರಾಮವು ದೇಶಕ್ಕೆ ಹೆಚ್ಚು ಸಂಖ್ಯೆಯ ಸೈನಿಕರನ್ನು ನೀಡಿದ ಕೀರ್ತಿ ಹೊಂದಿದೆ. ಬಾಗಲಕೋಟೆಯ ರಕ್ಷಣೆಗೆ ಸೈನಿಕರಾಗಿ ನಿಂತಿರುವ ಚರಂತಿಮಠರಿಗೆ ಮತನೀಡಿ ಆಯ್ಕೆ ಮಾಡಿ. ಬಜೆಟ್‌ನಲ್ಲಿ ನೂರು ಶಾಲೆಗಳ ಅಭಿವೃದ್ಧಿಗೆ ಆದೇಶ ಮಾಡಲಾಗಿದ್ದು, ಶಿರೂರು ಗ್ರಾಮ ಕಡೆಗಣಿಸಿದ್ದಾರೆ. ಇಲಾಖೆಗಳಿಗೆ, ಉದ್ಯೋಗಿಗಳಿಗೆ ಸಂಬಳ ಕೊಡದ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರ ಮತ್ತು ಸಚಿವರ ಆಪ್ತ ಕಾರ್ಯದರ್ಶಿಗಳಿಗೂ ಸಂಬಳ ಕೊಡಲಾಗದ ಆರ್ಥಿಕ ಸಂಕಷ್ಟದಿಂದ ನರಳುತ್ತಿದೆ ಎಂದು ದೂರಿದರು.

ಮಾಜಿ ಶಾಸಕ ಮುರುಗೇಶ ನಿರಾಣಿ ಮಾತನಾಡಿ, ಕೋಟ್ಯಂತರ ಹಣ ಸಾಲ ಮಾಡಿರುವುದೇ ಕಾಂಗ್ರೆಸ್ ಸಾಧನೆಯಾಗಿದೆ. ದೇಶವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ ಕಾಂಗ್ರೆಸ್ ಆಡಳಿತದ ನಂತರ ದೇಶದ ಆರ್ಥಿಕತೆಯನ್ನು ಜಗತ್ತಿನಲ್ಲಿಯೇ ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸಿದ ಕೀರ್ತಿ ಮೋದಿಯವರದ್ದಾಗಿದೆ. ಕಾಂಗ್ರೆಸ್ ಶಾಸಕರೇ ಸರಕಾರ ತೊಲಗಲಿ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಚರಂತಿಮಠರ ಆಡಳಿತದಲ್ಲಿ ಜಾರಿಯಾದ ಗುತ್ತಿಗೆ ಕೆಲಸಗಳನ್ನು ಕೂಡ ಮಾಡುವಲ್ಲಿ ಅಸಮರ್ಪಕವಾಗಿದೆ. ಈ ಬಾರಿ ವೀರಣ್ಣ ಚರಂತಿಮಠರಿಗೆ ಕುಟುಂಬ ಸಮೇತ ಮತನೀಡಿ ಎಂದು ಮನವಿ ಮಾಡಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಗ್ಯಾರಂಟಿ ಹೆಸರಲ್ಲಿ ಮತಪಡೆದು ಮೂರು ವರ್ಷ ಕಳೆದಿದ್ದು ಮುಖ್ಯಮಂತ್ರಿ ಕುರ್ಚಿ ಕಚ್ಚಾಟವೇ ಸಾಧನೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಲ್ಲ. ಹೆಸರಿಗಷ್ಟೇ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದು, ಅಧಿಕಾರವು ಗಾಂಧಿ ಕುಟುಂಬದ ಕೈಯಲ್ಲಿದೆ. ಸಮರ್ಥ ನಾಯಕರಿಲ್ಲದೆ ದೇಶದಾದ್ಯಂತ ಸೋಲು ಕಂಡಿದ್ದು ಮುಳಗುವ ಹಡುಗಿನಂತಾಗಿದೆ. ವೀರಣ್ಣ ಚರಂತಿಮಠರು ಮುಳಗಡೆ ಬಾಗಲಕೋಟೆಯನ್ನು ಅಭಿವೃದ್ಧಿ ನಗರವನ್ನಾಗಿ ಮಾಡಿದ್ದು ಶಿಕ್ಷಣ, ಆರೋಗ್ಯ, ಔದ್ಯೋಗಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ ಅವರ ಪರವಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ವೀರಣ್ಣ ಚರಂತಿಮಠ ಅವರು ಮಾತನಾಡಿದರು. ಈ ವೇಳೆ ಶಾಸಕರಾದ ಸಿದ್ದು ಸವದಿ, ಜಗದೀಶ್ ಗುಡಗುಂಟಿ, ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಎ.ಎಸ್ ಪಾಟೀಲ ನಡಹಳ್ಳಿ, ಪಿ.ರಾಜೀವ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತನಗೌಡ ಪಾಟೀಲ, ಶಿರೂರ ಗ್ರಾಮದ ಬಿಜೆಪಿ ಮುಖಂಡರಾದ ಸುರೇಶ ಅಂಗಡಿ,ಪ್ರಶಾಂತ ಕೋಟಿ ಸೇರಿದಂತೆ ಕಾರ್ಯಕರ್ತರು ಇದ್ದರು.

ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶನ:

ಶಿರೂರದಲ್ಲಿ ತೆರೆದ ವಾಹನದಲ್ಲಿ ಬಿಜೆಪಿ ನಾಯಕರ ಬೃಹತ್ ರೋಡ್ ಶೋ ಮಾಡುವುದರ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಪಟ್ಟಣದ ಮಹಾದ್ವಾರದಿಂದ ಪಪಂವರೆಗೆ ನಡೆದ ಶೋಭಾಯಾತ್ರೆಯಲ್ಲಿ ರಾಜ್ಯಾಧ್ಯಕ್ಷರಿಗೆ ಪುಷ್ಪ ಮಳೆಗೈದು ಸ್ವಾಗತ ಮಾಡಿದರು. ಕಮಲ ಚಿಹ್ನೆಯ ಬಾವುಟಗಳ ಹಾರಟದಿಂದ ಶಿರೂರ ಪಟ್ಟಣ ಕೇಸರಿಮಯವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಗಳಿಯಲ್ಲಿ ಮಹಾವೀರ ಜಯಂತಿ ಆಚರಣೆ
ಮನುಕುಲ ಉದ್ದಾರಿಸಿದ ಮಹಾನ್ ಚೇತನ: ಶಿವಲೀಲಾ ಸದಾಶಿವ ಬುಟಾಳಿ