ಗಂಗಾವತಿ:
ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿ ಮಧ್ಯದಲ್ಲಿರುವ ಶ್ರೀಕೃಷ್ಣದೇವರಾಯ ಸಮಾಧಿಯ 64 ಕಂಬಗಳ ಮಂಟಪದಲ್ಲಿ ಮಾಂಸ ಶುದ್ಧೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.ಮಾಂಸ ಶುದ್ಧೀಕರಣ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಆನೆಗೊಂದಿಯ ಹನುಮಂತ, ಫಕೀರಪ್ಪ, ಹುಲಗಪ್ಪ ಎನ್ನುವವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಮಾರಕಗಳಿಗೆ ರಕ್ಷಣೆ:ಶ್ರೀಕೃಷ್ಣದೇವರಾಯ ಸಮಾಧಿಯ 64 ಕಂಬಗಳ ಮಂಟಪ ಸೇರಿದಂತೆ ಇಲ್ಲಿರುವ ಎಲ್ಲ ಸ್ಮಾರಕಗಳಿಗೆ ರಕ್ಷಣೆ ನೀಡಲಾಗುವುದು. ಆನೆಗೊಂದಿ ಮತ್ತು ಹಂಪಿ ವಿಜಯನಗರ ಸಾಮ್ರಾಜ್ಯದ ಪ್ರದೇಶವಾಗಿದ್ದು ಇಲ್ಲಿ ಬಹಳಷ್ಟು ಸ್ಮಾರಕಗಳಿವೆ. ಇವುಗಳ ರಕ್ಷಣೆ ಇಲಾಖೆ ಮತ್ತು ಸಾರ್ವಜನಿಕರದ್ದು ಎಂದ ಅವರು, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಕೂಡಲೇ ರಕ್ಷಕರನ್ನು ಹಾಗೂ ಮಾರ್ಗದರ್ಶಕರನ್ನು ನಿಯೋಜಿಸಲಾಗುವುದು ಎಂದರು.
ಮಾಂಸ ಶುದ್ಧೀಕರಣ ಪ್ರಕರಣ ಆಕಸ್ಮಿಕ ಘಟನೆ ಆಗಿದ್ದರೂ ಹಲವರಿಗೆ ನೋವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರವಾಸೋದ್ಯಮ ಇಲಾಖೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದ ಸಚಿವರು, ಕನ್ನಡಿಗರಾದ ನಾವು ನಮ್ಮತನ ಉಳಿಸಿಕೊಂಡು ಗೌರವಿಸಬೇಕಾಗಿದೆ. ನಮ್ಮ ಹಳೆಯ ಸಾಮ್ರಾಜ್ಯಗಳ ಕುರುಹುಗಳನ್ನು ಉಳಿಸಬೇಕಾಗಿದೆ ಎಂದರು.ಕೇವಲ ಹಂಪಿ ಉತ್ಸವ ಮಾಡಿ ಮನೋರಂಜನೆ ಪಡೆದರೆ ಸಾಲದು. ಜತೆಗೆ ಇತಿಹಾಸ ಮತ್ತು ಪ್ರಾಚ್ಯವಸ್ತುಗಳನ್ನು ಉಳಿಸುವ ಕಾರ್ಯವಾಗಬೇಕಾಗಿದೆ ಎಂದ ಅವರು, ಶ್ರೀಕೃಷ್ಣದೇವರಾಯನ ಸಮಾಧಿ ಮಂಟಪವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಇಲ್ಲಿನ ಇತಿಹಾಸದ ಕುರಿತು ತಿಳಿಸಲಾಗುವುದು ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಉತ್ತರಿಸಿದ ಸಚಿವರು, ಶ್ರೀಕೃಷ್ಣದೇವರಾಯರ ಸಮಾಧಿಗೆ ಅಪಮಾನವಾಗಿರುವುದು ಒಪ್ಪಿಕೊಳ್ಳುತ್ತೇವೆ. ಆದರೆ, ಇದರಲ್ಲಿ ರಾಜಕೀಯ ಬೆರಸಬಾರದು ಎಂದರು.ಅಂಜನಾದ್ರಿ ಅಭಿವೃದ್ಧಿ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಲಾಗುವುದು. ಆನೆಗೊಂದಿ ಪ್ರದೇಶದಲ್ಲಿ ಪೊಲೀಸ್ ಠಾಣೆ ಕುರಿತು ಏ.24ರಂದು ಮಲೇಮಹಾದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗೃಹ ಸಚಿವರ ಗಮನಕ್ಕೆ ತರಲಾಗುವುದು ಎಂದ ಸಚಿವರು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವರದಿ ಸಂಪುಟದಲ್ಲಿ ಇರಿಸಲಾಗಿದೆ. ಸಚಿವರು ಅಧ್ಯಯನ ಮಾಡಿದ್ದಾರೆ. ಈ ಕುರಿತು ಕೆಲವರಿಗೆ ಮಾಹಿತಿ ಕೊರೆತೆಯಿದ್ದು ಜಾಗೃತಿ ಮೂಡಿಸಲಾಗುವುದು ಎಂದರು.
ಈ ವೇಳೆ ಸಂಸದ ರಾಜಶೇಖರ್ ಹಿಟ್ನಾಳ, ರಾಜವಂಶಸ್ಥೆ ಲಲಿತರಾಣಿ ಶ್ರೀರಂಗದೇವರಾಯಲು, ರಾಜಾ ಶ್ರೀಕೃಷ್ಣದೇವರಾಯ, ಸಹಾಯಕ ಆಯುಕ್ತ ಕ್ಯಾ, ಮಹೇಶ ಮಾಲಗಿತ್ತಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಉದ್ಯಮಿ ಕೆ. ಕಾಳಪ್ಪ, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ, ಶ್ರೀನಿವಾಸ ರೆಡ್ಡಿ, ತಿರುಕಪ್ಪ, ವಿಷ್ಣುತೀರ್ಥ ಜೋಶಿ , ಮುಜರಾಯಿ ಇಲಾಖೆಯ ಸಿಇಒ ಪ್ರಕಾಶ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇದ್ದರು.