ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಅವಿನಾಶ

KannadaprabhaNewsNetwork |  
Published : Feb 10, 2024, 01:48 AM IST
9ಎಚ್‌ಪಿಟಿ2-ಹೊಸಪೇಟೆಯಲ್ಲಿ ನಡೆದ ತರಬೇತಿ ಶಿಬಿರಕ್ಕೆ ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿ ಅವಿನಾಶ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಬಾಲ್ಯವಿವಾಹ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಕಾಯ್ದೆಯ ಕುರಿತು ಜಾಗೃತಿ ಮೂಡಿಸಬೇಕು.

ಹೊಸಪೇಟೆ: ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು ಮತ್ತು ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಅವಿನಾಶ ತಿಳಿಸಿದರು.

ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಂದಾಯ ಇಲಾಖೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಚೈತನ್ಯ ಗ್ರಾಮೀಣಾಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ನಗರದ ತಾಪಂ ವಿದ್ಯಾರಣ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ ಕಾಯ್ದೆ- 2015 ತಿದ್ದುಪಡಿ 2021 ಹಾಗೂ Adoption Regulations- 2022) ವಿಷಯಗಳಿಗೆ ಜನನ ಮತ್ತು ಮರಣ ನೋಂದಣಿ ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲಾ ಇಲಾಖೆಗಳು ಒಂದಾಗಿ ಕೆಲಸ ಮಾಡಬೇಕು. ಸಮಾಜದಲ್ಲಿ ಮೊದಲು ಅರಿವು ಮೂಡಿಸುವ ಕಾರ್ಯ ಆಗಬೇಕು. ಬಾಲ್ಯವಿವಾಹ, ದೌರ್ಜನ್ಯ, ಭಿಕ್ಷಾಟನೆ, ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಹಲವು ಆಯಾಮಗಳಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಬೇಕಿದೆ. ಬಾಲ್ಯವಿವಾಹವನ್ನು ತಡೆಯುವ ಮಹತ್ತರ ಕೆಲಸ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನಿಯವಾಗಿದೆ. ಇನ್ನು ಕೆಲವೊಂದು ಕಡೆ ಕಣ್ಣು ತಪ್ಪಿಸಿ ನಡೆಯುತ್ತಿವೆ. ಅಂತಹ ಅಪರಾಧಗಳನ್ನು ತಡೆಯುವಲ್ಲಿ ಇನ್ನಷ್ಟು ಸಕ್ರಿಯವಾಗಿ ಕೆಲಸ ಮಾಡಬೇಕಿದೆ ಎಂದರು.

ಮೊದಲು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡುವ ಕಾರ್ಯ ಆಗಬೇಕು. ಗ್ರಾಮೀಣ ಮಟ್ಟದಿಂದ ಹಿಡಿದು, ನಗರ ಪ್ರದೇಶಗಳಲ್ಲೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸವಾಗಬೇಕು. ಮಕ್ಕಳು ಶಾಲೆಗೆ ಹೋಗುವಂತೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರದ್ದಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ, ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ರಾಘವೇಂದ್ರ ಮಾತನಾಡಿ, ಬಾಲ್ಯವಿವಾಹ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಕಾಯ್ದೆಯ ಕುರಿತು ಜಾಗೃತಿ ಮೂಡಿಸಬೇಕು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕಾನೂನು ರೀತ್ಯ ಕ್ರಮ ವಹಿಸಬೇಕು. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಪೋಕ್ಸೋ ಕಾಯ್ದೆ- 2012ಅನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು. ಜತೆಗೆ ಈ ಕಾಯ್ದೆ ಅಂಶಗಳನ್ನು ಪ್ರಚುರಪಡಿಸಬೇಕಿದೆ ಎಂದರು.

ತಾಪಂ ಇಒ ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ವೈದ್ಯಾಧಿಕಾರಿ ಡಾ. ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಕ್ಕಳ ಘಟಕದ ರಕ್ಷಣಾಧಿಕಾರಿ ಸುದೀಪ್ ಕುಮಾರ್, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ ಯು., ಮಕ್ಕಳ ರಕ್ಷಣಾ ಘಟಕದ ಗಂಗಾಧರ್ ಡಿ., ಶರಣಪ್ಪ, ಶ್ರೀಕಾಂತ, ಲಿಂಗರಾಜ, ಸಖಿ ಘಟಕದ ವಿದ್ಯಾ, ಉಮಾ, ಬಸಮ್ಮ ಆಸ್ಪತ್ರೆ ಸಿಬ್ಬಂದಿ ಭಾಗಿಯಾಗಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ