ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಹರಿಹರಪುರ ಶ್ರೀ

KannadaprabhaNewsNetwork |  
Published : Jul 07, 2025, 11:48 PM IST
೦೭ಬಿಹೆಚ್‌ಆರ್ ೨: ಹರಿಹರಪುರ ಶ್ರೀ | Kannada Prabha

ಸಾರಾಂಶ

ಬಾಳೆಹೊನ್ನೂರು, ಭಾರತೀಯ ಸಂಸ್ಕೃತಿ ಮಹೋನ್ನತಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಿದ್ದು, ನಮ್ಮ ಸಂಸ್ಕೃತಿ ತಾಯಿ ಸ್ಥಾನದಲ್ಲಿದೆ.ಇದು ವಿಕಾಸಗೊಳ್ಳಲು ಸಾವಿರಾರು ವರ್ಷಗಳು ಬೇಕಿದೆ ಎಂದು ಹರಿಹರಪುರ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಪೀಠದ ಜಗದ್ಗುರು ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಭಾರತೀಯ ಸಂತ ಮಹಾ ಪರಿಷದ್ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಆಶೀರ್ವಚನ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭಾರತೀಯ ಸಂಸ್ಕೃತಿ ಮಹೋನ್ನತಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಿದ್ದು, ನಮ್ಮ ಸಂಸ್ಕೃತಿ ತಾಯಿ ಸ್ಥಾನದಲ್ಲಿದೆ.ಇದು ವಿಕಾಸಗೊಳ್ಳಲು ಸಾವಿರಾರು ವರ್ಷಗಳು ಬೇಕಿದೆ ಎಂದು ಹರಿಹರಪುರ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಪೀಠದ ಜಗದ್ಗುರು ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಭಾರತೀಯ ಸಂತ ಮಹಾ ಪರಿಷದ್ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಆಶೀರ್ವಚನ ನೀಡಿದರು. ಭರತ ಭೂಮಿಯಲ್ಲಿ ಜನಿಸಿ ವಿಕಾಸವಾದ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ ಯಾಗಿದ್ದು, ಒಂದು ಭೌಗೋಳಿಕ ಪ್ರದೇಶದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ, ಐತಿಹಾಸಿಕ, ವೈಜ್ಞಾನಿಕ ಪರಂಪರೆ ದ್ರುವೀಕರಣ ಆದಾಗ ಅದು ಸಂಸ್ಕೃತಿ ಆಗಿ ವಿಕಾಸವಾಗಲಿದೆ ಎಂದರು.

ಭಾರತೀಯ ಸಂಸ್ಕೃತಿ ಸದಾ ಜಗತ್ತಿಗೆ ವಿವಿಧತೆಯಲ್ಲಿ ಏಕತೆ ಸಾರುವ ಏಕೈಕ ಸಂಸ್ಕೃತಿ. ಭಾರತೀಯ ಸಂಸ್ಕೃತಿ ಹೃದಯ ವೈಶಾಲ್ಯ ಹೊಂದಿದ ಸಂಸ್ಕೃತಿಯಾಗಿದೆ. ಭಾರತೀಯ ಸಂಸ್ಕೃತಿ ಪ್ರಕಾರ ಸತ್ಯ ಒಂದೇ ಆದರೆ ಮಾರ್ಗಗಳು ಅನೇಕ. ವಿದೇಶಿ ಸಂಸ್ಕೃತಿಗಳ ಪ್ರಕಾರ ಸತ್ಯಕ್ಕೆ ಮಾರ್ಗ ಒಂದೇ ಎಂದು ಹೇಳುತ್ತದೆ. ವಿದೇಶಿ ಸಂಸ್ಕೃತಿ ಆಕ್ರಮಣಕಾರಿ ಮಾರ್ಗದಿಂದ ವಿಶ್ವದಲ್ಲಿ ಇಂದು ಶಾಂತಿ ವಾತಾವರಣ ಉಂಟಾಗಿದೆ. ಜಗತ್ತಿನ ಶಾಂತಿ, ಸಾಮರಸ್ಯ, ವಿಶ್ವ ಬ್ರಾತೃತ್ವಕ್ಕೆ ಮೂಲ ತಳಹದಿ ಭಾರತೀಯ ಸಂಸ್ಕೃತಿಯಾಗಿದ್ದು, ವಿಚಾರಕ್ಕೆ ಮುಕ್ತ ಅವಕಾಶ ನೀಡಿದೆ. ಸಂಸ್ಕೃತಿ ರಕ್ಷಣೆ ಮಾಡುವ ಪ್ರತಿಯೊಬ್ಬರಿಗೂ ವೈಯಕ್ತಿಕ, ಸಾಮಾಜಿಕ ಜವಾಬ್ದಾರಿಯಿದೆ ಎಂದರು.ಈ ನಿಟ್ಟಿನಲ್ಲಿ ಸಂಸ್ಕೃತಿ ಸಂರಕ್ಷಣೆ ಉದ್ದೇಶದಿಂದ ಕಳೆದ ಜೂ.16ರಂದು ಭಾರತೀಯ ಸಂಸ್ಕೃತಿಗೆ ಸೇರಿದ ಸಮಾನ ಮನಸ್ಕ ಪೂಜ್ಯ ಸಂತರೆಲ್ಲರೂ ಸೇರಿ ಲೋಕಕಲ್ಯಾಣಕ್ಕಾಗಿ ಭಾರತೀಯ ಸಂತ ಮಹಾ ಪರಿಷದ್‌ನ್ನು ಲೋಕಾರ್ಪಣೆ ಮಾಡಿ ಈ ಪರಿಷದ್ ಮೂಲಕ ಸಾಮಾನ್ಯ ಸಂಸ್ಕಾರ ಕೇಂದ್ರಗಳನ್ನು ಆರಂಭಿಸಿ, ಭಾರತೀಯ ಸಂಸ್ಕೃತಿಗೆ ಸೇರಿದ ಎಲ್ಲಾ ಮಕ್ಕಳು ಸಹ ಯಾವುದೇ ಬೇಧಭಾವವಿಲ್ಲದೇ ಪೂರ್ಣ ಮನಸ್ಸಿನಿಂದ ಮುಕ್ತವಾಗಿ ಸಮಭಾವದಿಂದ ಬೆರೆತು ಭಾರತೀಯ ಸಂಸ್ಕಾರ ಶಿಕ್ಷಣ ನೀಡುವಂತ ವ್ಯವಸ್ಥೆಯಾಗಲಿದೆ ಎಂದು ತಿಳಿಸಿದರು.

ಎರಡನೇ ತರಗತಿಯಿಂದ 2ನೇ ತರಗತಿಯ ಮಕ್ಕಳಿಗೆ ಮೊದಲನೇ ಹಂತದ ಭಾರತೀಯ ಸಂಸ್ಕಾರ ಶಿಕ್ಷಣವನ್ನು ಪ್ರತೀ ಶನಿವಾರ, ಆರನೇ ತರಗತಿಯಿಂದ ಒಂಬತ್ತನೇಯ ತರಗತಿ ಮಕ್ಕಳಿಗೆ 2ನೇ ಹಂತದ ಭಾರತೀಯ ಸಂಸ್ಕಾರ ಶಿಕ್ಷಣವನ್ನು ಪ್ರತೀ ಭಾನುವಾರ ನೀಡಲಾಗುವುದು. ರಾಜ್ಯದಲ್ಲಿ 284 ತಾಲೂಕುಗಳನ್ನಾಗಿ ರಚಿಸಿಕೊಂಡಿದ್ದು, ಪ್ರತೀ ತಾಲೂಕಿನಲ್ಲಿ ಕನಿಷ್ಠ 200 ಸಾಮಾನ್ಯ ಸಂಸ್ಕಾರ ಕೇಂದ್ರ ಗಳನ್ನು ಆರಂಭಿಸಲಾಗುವುದು. ಸಂಸ್ಕಾರ ಶಿಕ್ಷಣದಲ್ಲಿ ಕಥೆ, ಗದ್ಯ, ಪದ್ಯ, ವಚನ, ಸಾಹಿತ್ಯ ಸೇರಿದಂತೆ ವಿವಿಧ ಭಾರತೀಯ ಸಂಸ್ಕೃತಿ ವಿಚಾರಗಳನ್ನು ಅಳವಡಿಸಲಾಗಿದೆ. ಭಾರತೀಯ ಸಂಸ್ಕೃತಿ, ಸಂಸ್ಕಾರ ಪ್ರತಿನಿಧಿಸುವ ಎಲ್ಲರನ್ನು ಒಂದು ಚೌಕಟ್ಟಿನೊಳಗೆ ತರುವುದೇ ಭಾರತೀಯ ಸಂತ ಮಹಾ ಪರಿಷತ್ತಿನ ಏಕೋದ್ದೇಶವಾಗಿದೆ. ರಾಜಕೀಯ ಸ್ವಾರ್ಥಕ್ಕಾಗಿ ಯಾವುದೇ ಕಾರಣಕ್ಕೂ ಸಂಸ್ಕೃತಿ ಹಾಳು ಮಾಡ ಬಾರದು. ರಾಜಕೀಯ ನಾಯಕರು, ಮತದಾರರ ದೃಷ್ಠಿಕೋನ ಬದಲಾಗ ಬೇಕಿದ್ದು, ರಾಜಕಾರಣಿಗಳು ಜಾತಿ, ಧರ್ಮ ಮುಂದಿಟ್ಟುಕೊಂಡು ಮತ ಕೇಳಬಾರದು, ತಮ್ಮ ಆಡಳಿತ, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳಬೇಕು ಎಂದು ಹೇಳಿದರು.

ಸಭೆಯಲ್ಲಿ ಹರಿಹರಪುರ ಶ್ರೀಗಳ ಆಪ್ತ ಸಹಾಯಕ ರಘುನಾಥ ಶಾಸ್ತಿç, ಪ್ರಬೋಧಿನಿ ಗುರುಕುಲದ ಉಮೇಶ್, ಪ್ರಮುಖರಾದ ಬಿ.ಕೆ.ಮಧುಸೂದನ್, ಭಾಸ್ಕರ್ ವೆನಿಲ್ಲಾ, ಆರ್.ಡಿ.ಮಹೇಂದ್ರ, ಎಸ್.ಎನ್.ರಾಮಸ್ವಾಮಿ, ಮಹೇಶ್ಚಂದ್ರ, ಟಿ.ಎಂ.ಉಮೇಶ್ ಕಲ್ಮಕ್ಕಿ, ಎಂ.ಎಸ್.ಚನ್ನಕೇಶವ್, ಕೆ.ಎನ್.ಮರಿಗೌಡ, ಕೆ.ಆರ್.ದೀಪಕ್, ಟಿ.ಎಂ.ನಾಗೇಶ್, ಪ್ರೇಮಲತಾ, ಸುಧಾ ಎಸ್.ಪೈ, ಹಿರಿಯಣ್ಣ, ಚಿ.ಸ.ಪ್ರಭುಲಿಂಗ ಶಾಸ್ತ್ರಿ, ಎನ್.ಎ.ಸಂಜೀವ, ಜಿ.ಎಂ.ನಟರಾಜ್, ಬಿ.ಜಗದೀಶ್ಚಂದ್ರ, ಪ್ರಭಾಕರ್ ಪ್ರಣಸ್ವಿ, ಮಹೇಶ್ ಆಚಾರ್ಯ, ಕೆ.ಟಿ.ವೆಂಕಟೇಶ್ ಮತ್ತಿತರರು ಹಾಜರಿದ್ದರು.೦೭ಬಿಹೆಚ್‌ಆರ್ ೨: ಹರಿಹರಪುರ ಶ್ರೀ

PREV