ಕನ್ನಡಪ್ರಭ ವಾರ್ತೆ ಜಮಖಂಡಿ
ದಸರಾ ಧರ್ಮ ಸಮ್ಮೇಳನಕ್ಕಾಗಿ ನಗರಕ್ಕೆ ಆಗಮಿಸಿದಾಗ ಶನಿವಾರ ಭಕ್ತರು ಸಂಯೋಜಿಸಿದ್ದ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಗತ್ತಿನ ಸೃಷ್ಟಿ ಸ್ಥಿತಿ ಮತ್ತು ಲಯಕ್ಕೆ ಮೂಲವಾಗಿರುವ ಪರಾಶಕ್ತಿ ಜಗನ್ಮಾತೆಯಾಗಿ, ಆದಿಶಕ್ತಿಯಾಗಿ, ದುರ್ಗಿಯಾಗಿ, ಚಾಮುಂಡೇಶ್ವರಿಯಾಗಿ ವಿವಿಧ ರೂಪಗಳಲ್ಲಿ ಪೂಜೆಗೊಳುತ್ತಾಳೆ. ಈ ಶಕ್ತಿಯೇ ಜೀವ ಜಗತ್ತಿನ ಚೈತನ್ಯ. ಸಕಲ ಜೀವಿಗಳ ಬದುಕಿನ ಆಧಾರ. ಧರ್ಮ ರಕ್ಷಣೆಯ ಮಹಾನ್ ಸಂಕೇತವಾಗಿದೆ. ಜಮಖಂಡಿಯಲ್ಲಿ ಜರುಗಲಿರುವ ದಸರಾ ಧರ್ಮ ಸಮ್ಮೇಳನ ಭಕ್ತಿ ಸಂಸ್ಕೃತಿ, ಧರ್ಮ, ನಿಷ್ಠೆ ಮತ್ತು ಜನಸಾಮರಸ್ಯದ ಮಹಾಪರ್ವವಾಗಿ ಕಂಗೊಳಿಸಲಿದೆ. ನಾಡಿನ ಜನಮನಗಳಲ್ಲಿ ಹೊಸ ಉತ್ಸಾಹ ನೋಡಿ ಬರಲಿದೆ. ಮನೆ ಮನಗಳಲ್ಲಿ ಮಂಗಳಕರ ಬೆಳಕನ್ನು ಹರಡಲಿದೆ. ಸಮಾಜದಲ್ಲಿ ಶಾಂತಿ ಸಹಬಾಳ್ವೆ ಮತ್ತು ಸಾಮರಸ್ಯಗಳನ್ನು ವೃದ್ಧಿಸಲಿದೆ. ದಸರಾ ನಾಡಹಬ್ಬ ಕೇವಲ ಸಂಭ್ರಮ ಸಡಗರದ ಆಚರಣೆಯಲ್ಲ. ನಮ್ಮೊಳಗಿನ ದುರ್ಗುಣಗಳನ್ನು ಜಯಿಸುವ ಸಂಕಲ್ಪದ ದಿನಗಳಾಗಲಿ. ಕ್ರೋಧದ ಮೇಲೆ ಶಾಂತಿ, ದ್ವೇಷದ ಮೇಲೆ ಪ್ರೀತಿ, ಸ್ವಾರ್ಥದ ಮೇಲೆ ಸೇವೆ, ಅಹಂಕಾರದ ಮೇಲೆ ವಿನಯ, ಸತ್ಯದ ಚೈತನ್ಯ ನಮ್ಮೆಲ್ಲರ ಬಾಳ ಬದುಕಿನಲ್ಲಿ ಮೂಡಿ ಬರಲಿದೆ. ಜಗನ್ಮಾತೆಯ ದಿವ್ಯ ಶಕ್ತಿ ರೈತರ ಬದುಕಿನಲ್ಲಿ ಸಮೃದ್ಧಿ, ವಿದ್ಯಾರ್ಥಿಗಳಲ್ಲಿ ಜ್ಞಾನ, ಯುವಜನತೆಯಲ್ಲಿ ಸಾಧನೆಯ ಛಲ, ಮಹಿಳೆಯರಲ್ಲಿ ಆತ್ಮವಿಶ್ವಾಸ, ಹಿರಿಯರಲ್ಲಿ ಆರೋಗ್ಯ ಹಾಗೂ ಪ್ರತಿಯೊಬ್ಬರ ಹೃದಯದಲ್ಲಿ ಧರ್ಮನಿಷ್ಠೆ ಮತ್ತು ಮಾನವೀಯತೆಯ ಆದರ್ಶಗಳು ಬೆಳೆದು ಬರುವಂತಾಗಲಿ ಎಂದು ಹಾರೈಸಿದರು. ಧರ್ಮವೇ ಸಮಾಜದ ಆಧಾರ. ಮಾನವೀಯತೆ ಜೀವನದ ಪರಮ ಮೌಲ್ಯ. ಧರ್ಮದ ಬೆಳಕು ಪ್ರಜ್ವಲಿಸಲಿ. ಸತ್ಯದ ಮಾರ್ಗ ಬಾಳಿಗೆ ಬೆಳಕು ತೋರಲಿ. ಸಕಲ ಜೀವಿಗಳಿಗೂ ಒಳಿತಾಗಬೇಕೆಂಬುದೇ ದಸರಾ ಹಬ್ಬದ ಮೂಲ ಆಶಯವಾಗಿದೆ. ಜಗದ್ಗುರು ರೇಣುಕಾಚಾರ್ಯರ ವಿಶ್ವಬಂಧುತ್ವದ ಸಾಮರಸ್ಯದ ವಿಚಾರಧಾರೆಗಳು ಜನಮನದ ವಿಕಾಸಕ್ಕೆ ಅಡಿಪಾಯವಾಗಿವೆ. ದಸರಾ ಧರ್ಮ ಸಮ್ಮೇಳನ ಈ ಹಿಂದಿನ ಎಲ್ಲ ದಸರಾ ಮಹೋತ್ಸವ ದಾಖಲೆಗಳನ್ನು ಮೀರಿ ಬಹಳ ದೊಡ್ಡ ಪ್ರಮಾಣದಲ್ಲಿ ಜರುಗಲಿದೆ ಎಂಬ ಆತ್ಮವಿಶ್ವಾಸ ನಮಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯರು, ಮುತ್ತಿನಕಂತೆ ಮಠದ ಶಿವಲಿಂಗ ಶಿವಾಚಾರ್ಯರು, ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹೆಡಗಾಪುರ, ಕಮಡೊಳ್ಳಿ, ಕರ್ಜಗಿ, ಅಂಬಾಜೋಗಾಯಿ ಸೇರಿ ಹಲವಾರು ಮಠಾಧೀಶರು ಮತ್ತು ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.ಜಮಖಂಡಿ ಕ್ಷೇತ್ರದ ಶಾಸಕರು ಸ್ವಾಗತ ಸಮಿತಿ ಮುಖ್ಯಸ್ಥ ಶಾಸಕ ಜಗದೀಶ ಗುಡಗುಂಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.