ಗದಗ: ಲಕ್ಕುಂಡಿ ಮಾದರಿಯಲ್ಲಿ ರಾಜ್ಯಾಧ್ಯಂತ ಇರುವ ಐತಿಹಾಸಿಕ ಸ್ಮಾರಕ, ಶಿಲಾ ಶಾಸನ, ಕೋಟೆ ಕೊತ್ತಲುಗಳ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಲಕ್ಕುಂಡಿ ಚಾಲುಕ್ಯರ ರಾಜಧಾನಿ ಆಗಿತ್ತು. ಚಾಲುಕ್ಯರ ಕಾಲದಲ್ಲಿ ಇಲ್ಲಿ ದೇವಸ್ಥಾನ, ಕೋಟೆ ನಿರ್ಮಿಸಲಾಗಿದೆ. ಇಲ್ಲಿ ಸಿಗುವ ಅವಶೇಷಗಳಿಂದ ಆ ಕಾಲದ ಶಿಲಾಶಾಸನಗಳ ಪರಿಚಯ ಮತ್ತು ರಾಜ್ಯಭಾರದ ಮಾಹಿತಿ ದೊರಕಿದೆ. ಸಚಿವ ಎಚ್.ಕೆ. ಪಾಟೀಲ ಆಸಕ್ತಿಯಿಂದಾಗಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ರಚನೆ ನಮ್ಮ ಸರ್ಕಾರದ ಅವಧಿಯಲ್ಲೇ ಆಗಿದೆ. ಇಲ್ಲಿ ದೊರೆತಿರುವ ಅವಶೇಷಗಳ ಪುನರುಜ್ಜೀವನಕ್ಕೆ ಸರ್ಕಾರದಿಂದ ಹಣ ಕೊಟ್ಟಿದ್ದೇವೆ. ಇದರಿಂದ ಐತಿಹಾಸಿಕ ಕುರುಹುಗಳನ್ನು ಸಂಗ್ರಹಿಸಲು, ರಕ್ಷಿಸಲು ಸಾಧ್ಯವಾಗಿದೆ ಎಂದರು.
ಬಯಲು ವಸ್ತು ಸಂಗ್ರಹಾಲಯ:ಈಗಾಗಲೇ ಇಲ್ಲಿ ಸಾಕಷ್ಟು ಮಹತ್ವದ ಅವಶೇಷ, ಶಿಲ್ಪಕಲೆ, ಶಿಲಾಶಾಸನ, ಮೂರ್ತಿಗಳು ಪತ್ತೆಯಾಗಿವೆ. ಉತ್ಖನನದ ಮೂಲಕ ಇನ್ನಷ್ಟು ಲಭಿಸಲಿವೆ. ಈ ಎಲ್ಲ ಕುರುಹುಗಳ ರಕ್ಷಣೆ ಮತ್ತು ಪ್ರದರ್ಶನಕ್ಕಾಗಿ ಲಕ್ಕುಂಡಿಯಲ್ಲಿ "ಬಯಲು ವಸ್ತು ಸಂಗ್ರಹಾಲಯ " ನಿರ್ಮಿಸಲಾಗುವುದು. ಇದಕ್ಕೆ ಅಗತ್ಯವಿರುವ ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾನೂನು ಉಲ್ಲಂಘಿಸಿ ಧರ್ಮದ ಹೆಸರು ಹೇಳಬಾರದು. ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಎಷ್ಟೇ ಪ್ರಭಾವಿ ಆದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಸಚಿವ ರಹೀಂ ಖಾನ್, ಸಲೀಂ ಅಹ್ಮದ, ನರಗುಂದ ಶಾಸಕ ಸಿ.ಸಿ. ಪಾಟೀಲ, ಅಜ್ಜಂಪೀರ ಖಾದ್ರಿ, ಸಂಸದ ಪಿ.ಸಿ. ಗದ್ದಿಗೌಡ್ರ, ಜಿ.ಎಸ್. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಮುಂತಾದವರು ಇದ್ದರು.