ಕೊಪ್ಪಳ: ನ್ಯಾಯಾಲಯಗಳಿಂದ ಮಾನವ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಹೇಳಿದರು.
ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಮಾತನಾಡಿ, ಮಾನವ ಹಕ್ಕು ಅರಿತು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಹಕ್ಕು, ಮಕ್ಕಳ ಹಕ್ಕು, ಯುವಕರ ಹಕ್ಕುಗಳು, ಮಹಿಳೆಯರ ಹಕ್ಕು ತಿಳಿದುಕೊಂಡರೆ ಯಾರಿಂದಲೂ ತೊಂದರೆ ಆಗಲು ಸಾಧ್ಯವಿಲ್ಲ. ಅಲ್ಲದೆ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕರು ತಿಳಿದುಕೊಂಡು ಅನುಸರಿಸಿದರೆ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಸಾರ್ಥಕವಾಗುತ್ತದೆ ಎಂದರು.
ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣವರ್ ಮಾತನಾಡಿ, ತಾಲೂಕಿನ ಕಿನ್ನಾಳ ಗ್ರಾಮದ ಮಂಜುನಾಥ ದೇವಪ್ಪ ಕಿನ್ನಾಳ ಎಂಬ ವಿದ್ಯಾರ್ಥಿ ವರ್ಷಕ್ಕೆ ಒಂದೇ ಜತೆ ಸಮವಸ್ತ್ರ ನೀಡುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಹೋಗಿದ್ದರಿಂದ ಎರಡು ಜತೆ ಸಮವಸ್ತ್ರ ವಿತರಣೆ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಈಗ ರಾಜ್ಯದ ಎಲ್ಲ ಶಾಲಾ ಮಕ್ಕಳಿಗೆ ಎರಡು ಜತೆ ಸಮವಸ್ತ್ರ ಪೂರೈಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಹಕ್ಕು ಪಡೆದುಕೊಳ್ಳಲು ಸಾಧ್ಯವಾಯಿತು. ಎಲ್ಲ ವಿದ್ಯಾರ್ಥಿಗಳು ತಮ್ಮ ಹಕ್ಕು ಅರಿತರೆ ವಂಚಿತರಾಗಲು ಸಾಧ್ಯವಿಲ್ಲ ಎಂದರು.ಶಿಕ್ಷಕಿ ಅನ್ನಪೂರ್ಣ ಪದ್ಮಸಾಲಿ ಮಾನವ ಹಕ್ಕುಗಳ ಕುರಿತು ಕವನ ವಾಚಿಸಿದರು. ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಪ್ರಭಾರಿ ಉಪ ಪ್ರಾಂಶುಪಾಲ ಅಬ್ದುಲ್ ಖಯ್ಯುಮ್ ಪರದೆಘರ್ ಮಾತನಾಡಿದರು.
ಶಿಕ್ಷಕರಾದ ಹುಲುಗಪ್ಪ ಅಡ್ಡಮನಿ, ಎ.ಎ. ನದಾಫ್, ಎಂ. ಎಚ್. ಕುರಿ, ಮಂಜುನಾಥ ಸವಡಿ, ಶಿಕ್ಷಕಿಯರಾದ ಸುಜಾತಾ ಮುದಗಲ, ಭಾಗ್ಯಲಕ್ಷ್ಮಿ, ಫರಹತ್ ಜಹಾನ್, ಶಿವಮ್ಮ, ಶಕುಂತಲಾ,ದರ್ಪಣ ಸಂಸ್ಥೆಯ ಕಾರ್ಯಕರ್ತ ಗಾಳೆಪ್ಪ ಪೂಜಾರ್ ಲೇಬಗೇರಿ, ಶಿಕ್ಷಕ ಗಂಗಾಧರ ಹಿರೇಮಠ ಇತರರಿದ್ದರು.