ಕನ್ನಡಪ್ರಭ ವಾರ್ತೆ ಕಾರವಾರ
ಗುರುವಾರ ಬೆಳಗ್ಗೆ ಸೈಟ್ ಎಮರ್ಜನ್ಸಿ ಡೈರೆಕ್ಟರ್, ಕೈಗಾ ಸೈಟ್ ಅವರಿಂದ ಬೆಳಗ್ಗೆ 6.30ಕ್ಕೆ ಸ್ವೀಕೃತವಾದ ಫ್ಯಾಕ್ಸ್ ಮತ್ತು ಈ ಮೇಲ್‌ನ ಅಧಿಸೂಚನೆಯ ಸಂದೇಶದಂತೆ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ವಿಕಿರಣ ಸೋರಿಕೆಯಾದ ಸಂದರ್ಭ ಸೃಷ್ಟಿಸಿಕೊಂಡು, ವಿಕಿರಣ ಸೋರಿಕೆ ವಲಯ ಎಲ್‌ರಲ್ಲಿನ ಹರ್ಟುಗಾ, ಗೂಳೆ ಮತ್ತು ನಗೆಕೋವೆ ಗ್ರಾಮಗಳಲ್ಲಿ ಮತ್ತು ವಲಯ ಎಂರಲ್ಲಿನ ಕುಚೆಗಾರ, ಶಿರ್ವೆ, ಕೆರವಡಿ, ದೇವಳಮಕ್ಕಿ ಗ್ರಾಮಗಳನ್ನು ಪ್ರಭಾವಿತ ಗ್ರಾಮಗಳೆಂದು ಗುರುತಿಸಿ ಈ ಕಾರ್ಯಾಚರಣೆ ನಡೆಸಲಾಯಿತು.
ವಿಕಿರಣ ಸೋರಿಕೆ ಬಗ್ಗೆ ಕೈಗಾ ಸ್ಥಳ ನಿರ್ದೇಶಕರಿಂದ ಮಾಹಿತಿ ಸ್ವೀಕೃತಿಯಾದ ಕೂಡಲೇ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 6.45ಕ್ಕೆ ತುರ್ತು ಸಭೆ ನಡೆಸಿ, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ತುರ್ತು ಅಗತ್ಯ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚನೆ ನೀಡಿ, ಜಿಲ್ಲಾಧಿಕಾರಿ ಕಚೇರಿಯಲ್ಲಿನ ಜಿಲ್ಲಾ ತುರ್ತು ಕಾರ್ಯಾಚರಣಾ ಕೇಂದ್ರದಲ್ಲಿ ತಕ್ಷಣದಿಂದಲೇ ಸಕ್ರಿಯವಾಗಿ ತೊಡಗಿಕೊಂಡು, ಎಲ್ಲಾ ಮುನ್ನೆಚ್ಚರಿಕಾ ಚಟುವಟಿಕೆ ನಿರ್ವಹಿಸುವಂತೆ ಸೂಚಿಸಿದರು.ಪೊಲೀಸ್ ಇಲಾಖೆಯಿಂದ ವಲಯ ಎಲ್ ಮತ್ತು ಎಂರಲ್ಲಿನ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಪ್ರಭಾವಿತ ಗ್ರಾಮಗಳಿಗೆ ವಾಹನಗಳ ಸಂಚಾರ ನಿರ್ಬಂಧಿಸಲಾಯಿತು. ಅಣು ವಿಕಿರಣವು ವಾತಾವರಣದಲ್ಲಿ ಗಾಳಿಯ ಮೂಲಕ ಹರಡುತ್ತಿದ್ದ ಪ್ರದೇಶದಲ್ಲಿನ ಸಾರ್ವಜನಿಕರಿಗೆ, ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಯಿತು.
ಅಣು ವಿದ್ಯುತ್ ಸ್ಥಾವರದಲ್ಲಿ ಸೋರಿಕೆಯಾದ ಅಣು ವಿಕಿರಣದ ಪ್ರಮಾಣವು ಅತ್ಯಂತ ಕಡಿಮೆ ಇದ್ದು, ಇದು ಸಾರ್ವಜನಿಕರಿಗೆ ಹೆಚ್ಚಿನ ಅಪಾಯ ಒಡ್ಡುವುದಿಲ್ಲ. ಈ ಸೋರಿಕೆಯನ್ನು ನಿಯಂತ್ರಿಸಲು ತಂತ್ರಜ್ಞರು ಎಲ್ಲಾ ರೀತಿಯ ಗರಿಷ್ಠ್ಠ ಪ್ರಯತ್ನ ಕೈಗೊಳ್ಳುತ್ತಿದ್ದು, ಜಿಲ್ಲಾಡಳಿತದೊಂದಿಗೆ ಕೈಗಾ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸಾರ್ವಜನಿಕರು ಮುನ್ಸೂಚನೆ ಪಾಲಿಸುವ ಬಗ್ಗೆ ಮಾಹಿತಿ ನೀಡಲಾಯಿತು.ಅಣು ವಿಕಿರಣವು ಹರಡುತ್ತಿದ್ದ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ವಿಕಿರಣದ ಅಪಾಯವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಕಿರಣ ತಡೆ ನಿಯಂತ್ರಣ ಮಾತ್ರೆ (ITB) ಗಳನ್ನು ವಿತರಿಸಲಾಯಿತು. ಈ ಪ್ರದೇಶಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಯಿತು. ಸಾರ್ವಜನಿಕರಿಗೆ ಸ್ಥಳೀಯವಾಗಿ ಸಿದ್ದಪಡಿಸಿದ ಆಹಾರ ಮತ್ತು ನೀರು ಸೇವನೆ ಮಾಡದಂತೆ ಸೂಚನೆ ನೀಡಿ, ಅವರಿಗೆ ಜಿಲ್ಲಾಡಳಿತದ ವತಿಯಿಂದ ಪ್ರಭಾವಿತ ವಲಯದ ಹೊರಗಿನಿಂದ ಸಿದ್ದಪಡಿಸಿದ ಆಹಾರದ ಪ್ಯಾಕೇಟ್ ಮತ್ತು ಕುಡಿಯುವ ನೀರಿನ ಬಾಟಲಿ ಸರಬರಾಜು ಮಾಡಲಾಯಿತು.
ಅಗತ್ಯ ಸಾಮಗ್ರಿ ಪೂರೈಕೆ ಮತ್ತು ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಮಾಡಲಾಗಿತ್ತು.ವಿಕಿರಣ ಹರಡಿದ್ದ ಹರ್ಟುಗಾ ಗ್ರಾಮದ ನಿವಾಸಿಗಳನ್ನು ಪ್ರಭಾವಿತ ವಲಯದ ಹೊರಗಿನ ಜೋಯಿಡಾ ತಾಲೂಕಿನ ಕುಂಬಾರವಾಡದ ಸಮುದಾಯ ಭವನಕ್ಕೆ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ವಿಕಿರಣ ಪ್ರಸಾರಗೊಂಡಿದ್ದ ಇತರೇ ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಮೂಲಕ ತಪಾಸಣೆ ನಡೆಸುವಂತೆ ಸೂಚನೆ ನೀಡಿ, ಅನಾವಶ್ಯಕವಾಗಿ ಹೊರಗಡೆ ಓಡಾಟ ನಡೆಸದಂತೆ ಮತ್ತು ಸ್ಥಳೀಯವಾಗಿ ಸಿದ್ದಪಡಿಸಿದ ಆಹಾರ ಮತ್ತು ನೀರು ಸೇವನೆ ಮಾಡದಂತೆ ಸೂಚನೆ ನೀಡಲಾಯಿತು.
ಮಧ್ಯಾಹ್ನ 2.10ರ ವೇಳೆಗೆ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಇಂದು ಬೆಳಗ್ಗೆ ಸೋರಿಕೆಯಾಗಿದ್ದ ಅಣು ವಿಕಿರಣದ ಹರಡುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಗೊಳಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.ಅಣಕು ಕಾರ್ಯಚರಣೆಯಲ್ಲಿ ಜಿಪಂ ಸಿಇಓ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠ ದೀಪನ್ ಎಂ.ಎನ್., ಡಿ.ಎಫ್.ಓ ರವಿಶಂಕರ್ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭ ಅರಣ್ಯ ಇಲಾಖೆಯಿಂದ ವಿರ್ಜೆ ಗ್ರಾಮದ ವ್ಯಾಪ್ತಿಯಲ್ಲಿ, ಅರಣ್ಯದಲ್ಲಿ ಸಂಭವಿಸುವ ಆಕಸ್ಮಿಕ ಬೆಂಕಿ ನಂದಿಸುವ ಕುರಿತ ಅಣಕು ಕಾರ್ಯಚರಣೆ ಯಶಸ್ವಿಯಾಗಿ ನಡೆಸಲಾಯಿತು.