ಹುಬ್ಬಳ್ಳಿ:
ಉತ್ತರಪ್ರದೇಶದ ವಾರಾಣಾಸಿಯಿಂದ 15 ಕಿಮೀ ದೂರದಲ್ಲಿರುವ ಕಪಿಲಧಾರಾ ಗ್ರಾಮದ ಸರಹದ್ದಿನಲ್ಲಿ ಲಭ್ಯವಾದ ಕನ್ನಡ ಶಾಸನದ ಶಾಶ್ವತ ಸಂರಕ್ಷಣೆಯ ಕಾರ್ಯ ಕಾಶಿ ಜ್ಞಾನ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದೆ.ಕ್ರಿ.ಶ. 1645ರಿಂದ 1660ರ ಅವಧಿಯಲ್ಲಿ ರಾಜ್ಯವಾಳಿದ ಕರ್ನಾಟಕದ ಶಿವಮೊಗ್ಗ ಜಿಲ್ಲೆ ಕೆಳದಿ ಸಂಸ್ಥಾನದ ಶಿವಪ್ಪ ನಾಯಕ ಅರಸರು ಕನ್ನಡನಾಡಿನ ಪಂಚಕ್ರೋಶಿ ಯಾತ್ರಾರ್ಥಿಗಳ ಸ್ನಾನ ಮತ್ತು ಬಟ್ಟೆ ತೊಳೆಯುವ ಅನುಕೂಲಕ್ಕಾಗಿ ಉತ್ತರಪ್ರದೇಶದ ವಾರಾಣಾಸಿ ಹತ್ತಿರದ ಕಪಿಲಧಾರಾದಲ್ಲಿ ಬೃಹತ್ ಸರೋವರ ನಿರ್ಮಿಸಿದ್ದರು. ಈ ನೆನಪನ್ನು ಶಾಶ್ವತವಾಗಿಡಲು ಶಿವಪ್ಪ ನಾಯಕರು ಈ ಶಾಸನ ಬರೆಯಿಸಿರಬೇಕೆಂದು ಹೇಳಲಾಗಿದೆ.
ಸರೋವರದ ಬಳಿಯೇ ಶಾಸನ ಅನಾಥವಾಗಿ ಬಿದ್ದಿರುವ ವಿಷಯ ತಿಳಿದ ತಕ್ಷಣ ಅದನ್ನು ಸುರಕ್ಷಿತ ಸ್ಥಳದಲ್ಲಿ ರಕ್ಷಿಸಲು ಸೂಚಿಸಿದ್ದ ಕಾಶಿ ಶ್ರೀಗಳು, ಖುದ್ದಾಗಿ ತಮ್ಮ ಪೀಠದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಶಾಸನ ಸ್ವಚ್ಛಗೊಳಿಸಿ ಅದನ್ನು ಬೇರೆಡೆಗೆ ಸ್ಥಳಾಂತರಿಸಲು ಬಾರದಂತೆ ಉಸುಕು ಮತ್ತು ಸಿಮೆಂಟ್ ಬಳಸಿ ಶಾಶ್ವತವಾಗಿ ಸರೋವರದ ಆವರಣದಲ್ಲಿಯೇ ಪ್ರತಿಷ್ಠಾಪಿಸಿದ್ದಾರೆ. ನಂತರ ಸರೋವರದ ಬಳಿ ಇರುವ ಪುರಾತನ ಶ್ರೀ ವೃಷಣಧ್ವಜೇಶ್ವರ ಮಹಾದೇವ ಮಂದಿರದಲ್ಲಿನ ಶಿವಲಿಂಗಕ್ಕೆ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು.ಕನ್ನಡದ ಜತೆಗೆ ಉರ್ದು ಹಾಗೂ ಹಿಂದಿ ಭಾಷೆಗಳನ್ನೂ ಸಹ ಈ ಶಾಸನ ಒಳಗೊಂಡಿದೆ. ಉತ್ತರಪ್ರದೇಶದಲ್ಲಿ ಹಿಂದಿಯೇ ಪ್ರಮುಖ ಭಾಷೆಯಾಗಿದ್ದು, 16ನೇ ಶತಮಾನದ ಸಂದರ್ಭದಲ್ಲಿ ಆ ಭಾಗದಲ್ಲಿ ಉರ್ದು ಭಾಷೆಯೂ ಸಹ ಜನಭಾಷೆಯಾಗಿ ಬಳಕೆಯಲ್ಲಿರಬಹುದಾದ ಸಾಧ್ಯತೆಯ ವಿಚಾರ ಈ ಶಾಸನದ ಲಿಪಿಯಿಂದ ತಿಳಿದುಬರುತ್ತದೆ.
ಈ ಸಂದರ್ಭದಲ್ಲಿ ಕಾಶಿ ಪೀಠದ ವ್ಯವಸ್ಥಾಪಕ ಶಿವಾನಂದ ಹಿರೇಮಠ, ಹಿರಿಯ ವಕೀಲ ಉದಯಭಾನ ಸಿಂಹ, ಎಂಜನೀಯರ್ ಅಶೋಕ ಪಾಂಡೆ ಸೇರಿದಂತೆ ಹಲವರಿದ್ದರು.