ಸಂಡೂರು: ಜೀವ ಜಗತ್ತಿಗೆ ಆಧಾರವಾದ ಭೂಮಿ, ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂಡೂರಿನ ನ್ಯಾಯಾಲಯದ ನ್ಯಾಯಾಧೀಶ ದೇವರೆಡ್ಡಿ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭೂಮಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲರಾದ ನಾಗರಾಜ ಗುಡೆಕೋಟೆ ಉಪನ್ಯಾಸ ನೀಡಿ, ಭೂಮಿಯ ಮೇಲಿನ ವಾತಾವರಣ, ಗಾಳಿ, ನೀರು ಕಲುಷಿತವಾಗಲು ಪರಿಸರ ನಾಶ ಕಾರಣವಾಗಿದೆ. ಜನತೆ ಜಾಗೃತರಾಗಿ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಪರಿಸರವನ್ನು ಸಂರಕ್ಷಣೆ ಮಾಡದಿದ್ದರೆ, ಸಂಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ವಿವರಿಸಿದರು.
ವಕೀಲ ಆರ್.ವೀರೇಶಪ್ಪ ಮಾತನಾಡಿ, ಜೀವ ಸಂಕುಲಕ್ಕೆ ಇರುವುದೊಂದೇ ಭೂಮಿ. ಜನಸಂಖ್ಯಾ ಹೆಚ್ಚಳದಿಂದ ಭೂಮಿಯ ಮೇಲೆ ಒತ್ತಡ ಹೆಚ್ಚುತ್ತಿದೆ. ಮಾನವನ ದುರಾಸೆಗೆ ಕಡಿವಾಣ ಹಾಕಬೇಕಿದೆ. ಜನಸಂಖೆಯನ್ನು ನಿಯಂತ್ರಿಸುವುದು ಅಗತ್ಯವಿದೆ. ಭೂಮಿಯ ಮೇಲಿನ ಪರಿಸರವನ್ನು ಸಂರಕ್ಷಿಸಲು ಎಲ್ಲರೂ ಶ್ರಮಿಸುವುದು ಅಗತ್ಯವಿದೆ ಎಂದು ತಿಳಿಸಿದರು.ವಕೀಲರ ಸಂಘದ ಅಧ್ಯಕ್ಷ ಅರಳಿ ಮಲ್ಲಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿ.ಎಸ್. ಮಂಜುನಾಥ್ ಪ್ರಾರ್ಥನೆ ಸಲ್ಲಿಸಿದರು. ಅಂಜಿನಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್. ರಾಜಶೇಖರ್ ವಂದಿಸಿದರು. ವಕೀಲರಾದ ಎಚ್.ಕೆ. ಬಸವರಾಜ, ಕಣ್ಣಿ ಕುಮಾರಸ್ವಾಮಿ, ಮಹಾರುದ್ರಪ್ಪ, ಅಂಜಿನಿ ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.