ಕನ್ನಡಪ್ರಭ ವಾರ್ತೆ ಸೊರಬ
ಗ್ರಾಮ ನಿರ್ಣಯದ ಮೂಲಕ ಗ್ರಾಮದ ಸಾರ್ವಜನಿಕ ಭೂಮಿಯನ್ನು ಉಳಿಸಿಕೊಳ್ಳಲು ಅವಕಾಶವಿದೆ, ಗ್ರಾಮ ನಿರ್ಣಯವನ್ನು ಗ್ರಾಪಂ ಜೀವವೈವಿಧ್ಯ ಸಮಿತಿ ಅಂಗೀಕರಿಸಿ ರಕ್ಷಣೆಗೆ ಸಹಕರಿಸಬಹುದಾಗಿದೆ ಎಂದು ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಹೇಳಿದರು.ತಾಲೂಕಿನ ಚಂದ್ರಗುತ್ತಿ ಗ್ರಾಮದ ಗ್ರಾಪಂ ಕಛೇರಿಯಲಿ ಅರಣ್ಯ ಭೂಮಿ, ಬೆಟ್ಟ, ಗೋಮಾಳ ರಕ್ಷಣೆ ಕುರಿತಂತೆ ಆಸಕ್ತಿ ತೋರಿರುವ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಈ ಹಿಂದೆ ತಾಲೂಕಿನ ಬಸ್ತಿಕೊಪ್ಪ ಗ್ರಾಮದಲ್ಲಿ ಗಣಿಹಾನಿ ಕುರಿತು ಗ್ರಾಮಸ್ಥರು ಸಾಮೂಹಿಕ ಪ್ರತಿಭಟನೆ ನಡೆಸಿದ ಪರಿಣಾಮ ಗಣಿಯಿಂದಾಗುವ ಹಾನಿ ನಿಯಂತ್ರಣ ಕ್ಕೆ ಬಂದಿದೆ. ಆ ವೇಳೆ ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿ, ಗ್ರಾಮ ಪಂಚಾಯಿತಿಯ ಜೀವವೈವಿಧ್ಯ ಸಮಿತಿ ಗ್ರಾಮಾಭಿವೃದ್ಧಿ ಶಿಬಿರ ನಡೆಸಿ ಕೊರತೆ ನೀಗಿಸಲು ಮುಂದಾಗಿದೆಯಾದರೂ ಇಂದಿಗೂ ಸಮರ್ಪಕ ಸಂಪರ್ಕ ರಸ್ತೆಯ ಕೊರತೆಯಿದೆ. ಸ್ಥಳೀಯ ಆಡಳಿತ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.ಹೊಳೆಮರೂರು ಗ್ರಾಮಸ್ಥರು ಅಪಾರ ಪ್ರಮಾಣದ ಅರಣ್ಯ ನಾಶ ತಡೆಗಟ್ಟಿ ಮಾದರಿಯಾಗಿದ್ದಾರೆ. ಈಚೆಗೆ ತೋರಣಗೊಂಡನಕೊಪ್ಪ ಗ್ರಾಮಸ್ಥರೂ ಸಹ ತಮ್ಮ ಗ್ರಾಮದಲ್ಲಿ ಸಾಮೂಹಿಕ ಭೂಮಿ, ಅರಣ್ಯ ಉಳಿಸಿಕೊಂಡಿರುವುದು ಪ್ರಶಂಸನೀಯ ಸಂಗತಿ ಎಂದು ಶ್ಲಾಘಿಸಿದರು.
ಬಿಎಂಸಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಗ್ರಾಮಸ್ಥರ ಸಹಕಾರವಿದ್ದರೆ ಆ ಗ್ರಾಮಗಳ ಸಾರ್ವಜನಿಕ ಭೂಮಿಗಳ ಉಳುವಿಗೆ ಜೀವವೈವಿಧ್ಯ ಸಮಿತಿ, ಮಂಡಳಿಯ ಸಹಕಾರವಿದೆ. ಭವಿಷ್ಯದ ಹಾಗೂ ಪ್ರಸ್ತುತದ ಪ್ರಕೃತಿ ವೈಪರೀತ್ಯದ ನಿಯಂತ್ರಣಕ್ಕೆ ಗ್ರಾಮ ಮಟ್ಟದ ಜಾಗೃತಿ ಆಗಬೇಕಿದೆ ಎಂದರು.ಜೂ.೨೩ರಂದು ಶಿರಸಿಯಲ್ಲಿ ನಡೆಯುವ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ರಾಜ್ಯ ಸಮ್ಮೇಳನ ನಡೆಯಲಿದ್ದು, ಪರಿಸರ ತಜ್ಞರು, ಚಿಂತಕರು ಆಗಮಿಸಲಿ ದ್ದಾರೆ. ಆದ್ದರಿಂದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು.
ಸಮಾವೇಶದ ಕಾರ್ಯಸೂಚಿ ಬಗ್ಗೆ ಮತ್ತು ಸಮಾವೇಶದಲ್ಲಿ ಅನಂತ ಹೆಗಡೆ ಆಶಿಸರ ಅವರಿಗೆ ಅಭಿನಂದನೆ ಸಲ್ಲಿಸುವುದು ಜೊತೆಗೆ ವೃಕ್ಷಮಿತ್ರ ಅಭಿನಂದನ ಗ್ರಂಥ ಲೋಕಾರ್ಪಣೆಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.ಸಭೆಯಲ್ಲಿ ಚಂದ್ರಗುತ್ತಿ ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಗ್ರಾ.ಪಂ. ಪಿಡಿಒ ನಾರಾಯಣಮೂರ್ತಿ, ಗ್ರಾ.ಪಂ. ಸದಸ್ಯೆ ಲಕ್ಷ್ಮೀ ಚಂದ್ರಪ್ಪ, ತೋರಣಗೊಂಡನಕೊಪ್ಪ ಗ್ರಾಮದ ದಿನೇಶ್, ವಿಷ್ಣು, ಹೊಳೆಮರೂರು ಗಂಗಾಧರ ಗೌಡ ಚಂದ್ರಗುತ್ತಿ, ವಿನಾಯಕ ಶೇಟ್ ಚಂದ್ರಗುತ್ತಿ, ಗ್ರಾಪಂ ನೌಕರ ಸಂತೋಷ್, ಮಂಜುನಾಥ್ ಉಪಸ್ಥಿತರಿದ್ದರು.