- ಆಡಳಿತ ಮಂಡಳಿ ವಜಾಗೊಳಿಸಿ, ಆಡಳಿತಾಧಿಕಾರಿ ನೇಮಕಕ್ಕೆ ಆಲೂರು ನಿಂಗರಾಜ, ಎಂ.ಹಾಲೇಶ ಒತ್ತಾಯ - - -
ಮಾದಿಗ ಸಮುದಾಯದ ಶೈಕ್ಷಣಿಕ ಆಸ್ತಿಯಾದ, ರಾಷ್ಟ್ರಪಿತ ಮಹಾತ್ಮ ಗಾಂಧಿ ಕೊಟ್ಟಿರುವ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಸ್ಥೆಯ ಮಹಾತ್ಮ ಗಾಂಧಿ ವಸತಿಯುತ ಶಾಲೆ ಆಡಳಿತ ಮಂಡಳಿ ವಜಾಗೊಳಿಸಿ, ಆಡಳಿತಾಧಿಕಾರಿ ನೇಮಿಸಲು ಒತ್ತಾಯಿಸಿ ಜುಲೈ 1ರಂದು ನಗರದಲ್ಲಿ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ಆಲೂರು ನಿಂಗರಾಜ, ಬೆಳಗ್ಗೆ 11 ಗಂಟೆಗೆ ಶ್ರೀ ಬೀರಲಿಂಗೇಶ್ವರ ಮೈದಾನದಿಂದ ಹೊರಟು ಚೇತನಾ ಹೋಟೆಲ್ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಮೂಲಕ ಉಪ ವಿಭಾಗಾಧಿಕಾರಿ ಕಚೇರಿ ತಲುಪಿ, ವಿವಿಧ ಬೇಡಿಕೆ ಈಡೇರಿಸುವಂತೆ ಎಸಿ ಅವರಿಗೆ ಮನವಿ ಅರ್ಪಿಸಲಾಗುವುದು ಎಂದರು.ಗಾಂಧೀಜಿ ಆಶಯದಂತೆ 1932ರಲ್ಲಿ ಆ ಮಹಾತ್ಮ ನಡೆದ ಜಾಗವನ್ನು ಮಾದಿಗ ಸಮುದಾಯದ ಬಡ, ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಊರಿನ ಹಿರಿಯರು ನೀಡಿದ್ದರು. ಈ ಮೂಲಕ ಸಮಾಜಕ್ಕೆ ಗಾಂಧೀಜಿ ನ್ಯಾಯ ಕೊಡಿಸಿದ್ದರು. ಸಂಸ್ಥೆಯಲ್ಲಿ ಆಡಳಿತಾತ್ಮಕ ಅವ್ಯವಸ್ಥೆ, ಶಾಲಾ ಜಾಗ ದುರುಪಯೋಗ ತಾಂಡವವಾಡುತ್ತಿದೆ. ಶಾಲೆ ಜಾಗದಲ್ಲಿ ಪಾಲಿಕೆ ಅನುಮತಿ ಪಡೆಯದೇ, ವಾಣಿಜ್ಯ ಮಳಿಗೆ ನಿರ್ಮಿಸಲಾಗುತ್ತಿದೆ. ಸಂಸ್ಥೆಯಲ್ಲಿ ಸಮಾಜ ಬಾಂಧವರಿಗೆ ಮುಕ್ತ ಸದಸ್ಯತ್ವ ನೀಡುವ ಕೆಲಸವಾಗಿಲ್ಲ. ಸಂಸ್ಥೆಯ ಆಡಳಿತ ವ್ಯವಸ್ಥೆ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಹೋರಾಟ ಆರಂಭಿಸಿದ ಚೇತನ್ ಕನ್ನಡಿಗನಿಗೆ ಬೆದರಿಕೆ ಕರೆ ಮಾಡಲಾಗಿದೆ. ಆತನಿಗೆ ಆಸೆ, ಆಮಿಷವೊಡ್ಡುವ ಕೆಲಸವಾಗಿದೆ. ಆದರೂ, ಅದೇ ಚೇತನ ವಿರುದ್ಧ ಸುಳ್ಳು ಹೇಳಿ, ಕೇಸ್ ಮಾಡಿಸುವ ಕೆಲಸ ನಡೆದಿದೆ. ಈಗಾಗಲೇ ನಾವು 2-3 ಸಭೆ ಮಾಡಿದ್ದೇವೆ. ಮುಂದಿನ ವಾರ ನಡೆಯುವ ಹೋರಾಟದ ಮೂಲಕ ಜಿಲ್ಲಾ ನೋಂದಣಾಧಿಕಾರಿಗಳು, ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುತ್ತೇನೆ. ಕಾನೂನು ಹೋರಾಟವನ್ನೂ ನಡೆಸುತ್ತೇವೆ. ನಮ್ಮ ಆರೋಪ ಸುಳ್ಳೆಂದು ಯಾರಾದರೂ ಹೇಳಿದರೆ, ಅಂತಹವರಿಂದ ಅಧಿಕೃತ ದಾಖಲೆ ಕೇಳಿ ಎಂದು ಆಲೂರು ನಿಂಗರಾಜ ತಿಳಿಸಿದರು.
ಸಂಸ್ಥೆ ಆಡಳಿತ ಮಂಡಳಿ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು. ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕು. ಕಳೆದ 2 ದಶಕದಿಂದ ಸಂಸ್ಥೆಗೆ ಸಮಾಜ ಕಲ್ಯಾಣ ಇಲಾಖೆ, ಶಾಸಕ, ಸಂಸದರು, ವಿಪ ಸದಸ್ಯರ ಅನುದಾನ, ವಿವಿಧ ಇಲಾಖೆಗಳಿಂದ ಬಂದ ಅನುದಾನ ಎಷ್ಟು, ಇಲಾಖೆಗಳಿಂದ ಎರಡೆರೆಡು ಸಲ ಅನುದಾನ ಪಡೆದ ಬಗ್ಗೆ ಸಮಗ್ರ ತನಿಖೆಯಾದರೆ ಕನಿಷ್ಠ 10-15 ಅಧಿಕಾರಿಗಳೂ ಸಸ್ಪೆಂಡ್ ಆಗುತ್ತಾರೆ. ಪಾಲಿಕೆ ಅನುದಾನವೂ ದುರ್ಬಳಕೆಯಾದ ಅನುಮಾನವಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
- - -