ಅಮಿತ್‌ ಶಾ ವಿರುದ್ಧ ಆಲೂರಿನಲ್ಲಿ ಪ್ರತಿಭಟನೆ

KannadaprabhaNewsNetwork | Published : Dec 21, 2024 1:17 AM

ಸಾರಾಂಶ

ಡಾ. ಬಿ ಆರ್‌ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಆಲೂರು

ರಾಜ್ಯಸಭೆಯಲ್ಲಿ ಡಾ. ಬಿ ಆರ್‌ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಎಂ ಎ ಅಂಕೇಗೌಡ ರವರ ಮೂಲಕ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಜಮಾಹಿಸಿದ್ದ ಕಾರ್ಯಕರ್ತರು, ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿ, ಕೂಡಲು ಕ್ಷಮೆ ಕೋರುವಂತೆ ಆಗ್ರಹಿಸಿದರು.

ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಬಸವರಾಜು ಗೇಕರವಳ್ಳಿ ಮಾತನಾಡಿ, ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವಾಗ ಅಂಬೇಡ್ಕರ್ ಅವರ ಹೆಸರನ್ನು ನೂರು ಬಾರಿ ಹೇಳುವ ಬದಲು ದೇವರ ಹೆಸರನ್ನು ಒಂದು ಬಾರಿ ಹೇಳಿದ್ದರೆ, ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ. ಕೂಡಲೇ ರಾಷ್ಟ್ರಪತಿಯವರು ಮಧ್ಯ ಪ್ರವೇಶ ಮಾಡಿ ಅಮಿತ್ ಶಾ ಸದಸ್ಯತ್ವವನ್ನು ಅನರ್ಹಗೊಳಿಸಿ ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶಾಂತ ಕೃಷ್ಣ ಮಾತನಾಡಿ, ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಪ್ರತಿಯೊಬ್ಬರಿಗೂ ಆಧಾರವಾಗಿದೆ. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರು ಇಂದು ಅಧಿಕಾರವನ್ನು ಅನುಭವಿಸುತ್ತಿದ್ದಾರೆ. ವಿಶ್ವದ ಅತ್ಯಂತ ಜ್ಞಾನಿ ಅಂಬೇಡ್ಕರ್ ಅವರನ್ನು ಗೃಹ ಸಚಿವ ಅಮಿತ್ ಶಾ ಅವಮಾನಿಸಿರುವುದು ಖಂಡನೀಯ ಕೂಡಲೇ ಅವರು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಗೇಕರವಳ್ಳಿ ಬಸವರಾಜು, ದಲಿತ ಮುಖಂಡ ಅಜ್ಜೇನಹಳ್ಳಿ ರಂಗಯ್ಯ, ಧರ್ಮಪ್ಪ, ಶಿವಣ್ಣ, ಟೀಕ್ ರಾಜ್, ಕಬೀರ್ ಅಹಮದ್, ಎಂ ಎಚ್ ರಂಗೇಗೌಡ, ರಾಜಶೇಖರ್, ಖಾಲಿದ್ ಪಾಷ, ಲೋಕೇಶ್ ಅಜ್ಜೇನಹಳ್ಳಿ, ಲೋಹಿತ್, ಜೈ ಭೀಮ್ ಜಗದೀಶ್, ಮಹಾಬೋಧಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಮಂಜುನಾಥ್, ಮಧು ಅಬ್ಬನ, ರವಿ ಕಾರ್ಜುವಳ್ಳಿ, ಹರೀಶ್, ಬೈರೇಶ್, ಜೆ ಪಿ, ರವಿಕುಮಾರ್, ನಿಂಗರಾಜ, ಹನುಮಯ್ಯ ಸೇರಿದಂತೆ ಇತರರು ಇದ್ದರು.

Share this article