ಕನ್ನಡಪ್ರಭ ವಾರ್ತೆ ಚಾಮರಾಜನಗರಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಮೇ 14ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಜನ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಷಲಿಷ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ರಾಜ್ಯ ಕಾರ್ಯದರ್ಶಿ ಬಿ.ರವಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಸಾಮಾನ್ಯರಿಗೆ ಆಸಹನೀಯವಾದ ಬೆಲೆ ಏರಿಕೆ, ಸಾರ್ವಜನಿಕ ಆರೋಗ್ಯ ಸೇವೆಗಳ ಕುಸಿತ, ನಿರಂತರವಾಗಿ ಶಿಕ್ಷಣದ ವ್ಯಾಪಾರೀಕರಣ, ರೈತ ಕಾರ್ಮಿಕರ ಬವಣೆಗಳ ಪರಿಹಾರಕ್ಕೆ ಒತ್ತಾಯಿಸಿ ಈ ಬೃಹತ್ ಜನ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ 10,000ಕ್ಕೂ ಹೆಚ್ಚು ಮಂದಿ ಈ ಹೋರಾಟದಲ್ಲಿ ಭಾಗವಹಿಸಲಿದ್ದು, ಮೈಸೂರು-ಚಾಮರಾಜನಗರ ವಿಭಾಗದಿಂದ ಸುಮಾರು 500ಮಂದಿ ಭಾಗವಹಿಸಲಿದ್ದಾರೆ ಎಂದರು.
ವಿದ್ಯುತ್ ಮಸೂದೆ-2022 (ತಿದ್ದುಪಡಿ)ನ್ನು ಹಿಂತೆಗೆದುಕೊಳ್ಳಿ, ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಿ. 6000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ಕೂಡಲೇ ಕೈಬಿಡಿ ಹಾಗೂ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಶಿಕ್ಷಕ ಸಿಬ್ಬಂದಿಯನ್ನು ಒದಗಿಸಬೇಕು ಎಂದರು.ನಿರುದ್ಯೋಗದಿಂದ ತತ್ತರಿಸಿರುವ ಯುವಜನರಿಗೆ ಉದ್ಯೋಗ ನೀಡಲು ತಕ್ಷಣವೇ ಸರ್ಕಾರಿ ಇಲಾಖೆಗಳ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಕೆಪಿಎಸ್ಸಿ ಸೇರಿದಂತೆ ನೇಮಕಾತಿಯಲ್ಲಿ ನಡೆಯುವ ಎಲ್ಲ ಹಂತದ ಭ್ರಷ್ಟಾಚಾರ ಮಟ್ಟ ಹಾಕಬೇಕು. ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಘೋಷಿಸಿ, ಅಲ್ಲಿಯವರೆಗೆ ಕನಿಷ್ಠ ವೇತನ ಪಾವತಿಸಿ, ಎಲ್ಲ ಇಲಾಖೆಗಳಲ್ಲಿರುವ ಗುತ್ತಿಗೆ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದರು.
ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರವೇ ಪಟ್ಟಾ ಒದಗಿಸಿ, ಕಾಡಂಚಿನ ಊರುಗಳಲ್ಲಿ ಮಾನವ ಕಾಡುಪ್ರಾಣಿಗಳ ಸಂಘರ್ಷ ತಡೆಗಟ್ಟಿಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಈ ಪ್ರತಿಭಟನೆಯಲ್ಲಿ ಆಗ್ರಹಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ ಮೇಟಿ, ಉಮಾದೇವಿ, ಯಶೋಧರ ಇದ್ದರು.