ಕನ್ನಡಪ್ರಭ ವಾರ್ತೆ ಹಳೇಬೀಡುರೈತರಿಗೆ ಸಮರ್ಪಕವಾಗಿ ೩ ಫೇಸ್ ವಿದ್ಯುತ್ ಪೂರೈಕೆ ಮಾಡದೆ ಇರುವದನ್ನು ಖಂಡಿಸಿ ಹಳೇಬೀಡಿನ ಚೆಸ್ಕಾಂ ಶಾಖೆಯ ವಿರುದ್ಧ ನಮ್ಮ ಹೋರಾಟ ಎಂದು ರಾಜ್ಯಾಧ್ಯಕ್ಷ ಸಮತ ಸೈನಿಕ ದಳದ ಆರ್‌ಪಿಐ ಸತೀಶ್ ಹಾಗೂ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಕುಮಾರ್ ತಿಳಿಸಿದರು. ಹಳೇಬೀಡಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರೈತ ಪರ ಸಂಘಟನೆಗಳ ಒಕ್ಕೂಟದಿಂದ ಹಳೇಬೀಡು ಚೆಸ್ಕಾಂ ಶಾಖೆಯ ಮುಂದೆ ಉಗ್ರ ಹೋರಾಟ ನಡೆಸಿ ಮಾತನಾಡುತ್ತಾ, ಗಂಗೂರು ಎಂ.ಯು.ಎಸ್ ಘಟಕಕ್ಕೆ ಹೆಚ್ಚುವರಿಯಾಗಿ ೬೬/೧೧ ಕೆ. ವಿ. ಟಿ. ಸಿ ಅಳವಡಿಸಲು ಸರ್ಕಾರದಿಂದ ೮೩೮.೬೫ ಲಕ್ಷ ಅನುದಾನ ನೀಡಿದೆ. ಆದರೂ ಗುತ್ತಿಗೆದಾರರು ಬರುತ್ತಿಲ್ಲ ಎಂಬುದು ಬೇಸರದ ವಿಚಾರವಾಗಿದೆ. ಟೆಂಡರ್ ಪ್ರಕ್ರಿಯೆ ತಕ್ಷಣವೇ ಕರೆಸಿ ಶೀಘ್ರವೇ ಕಾಮಗಾರಿ ಪ್ರಾರಂಭಿಸಬೇಕು ಹಾಗೂ ರೈತರಿಗೆ ೩ ಫೇಸ್ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ಪ್ರತಿದಿನವೂ ಸರ್ಕಾರ ಆದೇಶದಂತೆ ಏಳು ಗಂಟೆ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಈ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಮಾಡಬಾರದು, ಗಂಗೂರು ವ್ಯಾಪ್ತಿಯ ರೈತರಿಗೆ ೩ ಫೇಸ್ ವಿದ್ಯುತ್ ಸರಬರಾಜು ಮಾಡಲು ವಿಫಲರಾಗಿರುವ ಹಾಗೂ ರೈತರ ಮೇಲೆ ಉಡಾಫೆಯಾಗಿ ನಡೆದುಕೊಳ್ಳುವ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್‌ಗಳನ್ನು ಕೂಡಲೇ ವರ್ಗಾಯಿಸಬೇಕೆಂದು ಒತ್ತಾಯಿಸಿದರು.ಜಿಲ್ಲಾ ಸಂಘಟನಾ ಸಂಚಾಲಕ ಲಿಂಗರಾಜು ಮಾತನಾಡುತ್ತ, ಹಳೇಬೀಡಿನಲ್ಲಿ ಹೆಸರಾಂತ ದೇವಾಲಯವಿದ್ದು ಇಲ್ಲಿಗೆ ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದು ನಿತ್ಯವೂ ಕರೆಂಟಿನ ಕಣ್ಣ ಮುಚ್ಚಾಲೆಯಿಂದ ಬೇಸರ ಸಂಗತಿಯಾಗಿದೆ. ಇಂದಿನ ಕರೆಂಟಿನ ಬೆಲೆ ದುಪ್ಪಟ್ಟಾಗಿದ್ದು ಸಣ್ಣ-ಪುಟ್ಟ ಅಂಗಡಿವರಿಗೆ ಈ ಕರೆಂಟ್ ಬಿಲ್‌ನ್ನು ಕಟ್ಟಲು ಕಷ್ಟಕರವಾಗುತ್ತದೆ. ನಿರಂತರ ಕರೆಂಟ್ ಇಲ್ಲದೆ ಕಣ್ಣಮುಚ್ಚಾಲೆಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳು ಓದಲು ತೊಂದರೆಯಾಗಿದೆ. ಹಳೇಬೀಡಿಗೆ ಹೆಚ್ಚುವರಿ ವಿದ್ಯುತ್ ಘಟಕವನ್ನು ತಕ್ಷಣವೇ ಮಾಡಬೇಕು. ಇಲ್ಲವಾದರೆ ಬೇಲೂರಿನ ಕಾರ್ಯ ಪಾಲಕ ಅಭಿಯಂತರ ಕಚೇರಿ ಮುಂದೆ ಉಗ್ರ ಹೋರಾಟ ಮತ್ತೆ ರಸ್ತೆ ತಡೆ ಚಳವಳಿ ಮಾಡಲಾಗುವುದು ಎಂದು ತಿಳಿಸಿದರು.ಬೇಲೂರು ಎ.ಇ.ಇ. ಬಸವರಾಜು ಮಾತನಾಡುತ್ತಾ, ಈ ಭಾಗದ ಐ.ಪಿ ಪವರ್ ತುಂಬಾ ಹೆಚ್ಚಾಗಿದೆ. ಲೈನು ಚೇಂಜ್ ಮಾಡುವಾಗ ತಾಂತ್ರಿಕ ದೋಷದಿಂದ ಕರೆಂಟು ಪದೇ ಪದೇ ಹೋಗುತ್ತಾ ಇದೆ. ಈ ಭಾಗದ ಗಂಗೂರಿಗೆ ಹೊಸ ಟಿಸಿಯನ್ನು ಅಳವಡಿಸಿದರೆ ಕರೆಂಟಿನ ತೊಂದರೆ ಕಮ್ಮಿ ಆಗುತ್ತದೆ. ಇದರ ಬಗ್ಗೆ ಕೆಪಿಟಿಸಿಎಲ್ ಮಾಹಿತಿ ನೀಡಿದ್ದೇವೆ. ತಕ್ಷಣವೇ ಟಿ.ಸಿ ಬರುವುದು. ಬಂದ ತಕ್ಷಣವೇ ಗಂಗೂರಿಗೆ ಅಳವಡಿಸಿದರೆ ಕರೆಂಟಿನ ತೊಂದರೆ ನಿವಾರಣೆ ಆಗುತ್ತದೆ. ಅದೇ ರೀತಿ ಹಳೇಬೀಡಿಗೆ ಇಂದು ಕಾರ್ಯಪಾಲಕ ಕಚೇರಿಯನ್ನು ಪ್ರಾರಂಭ ಮಾಡಬೇಕಾಗಿತ್ತು. ಆದರೆ ಇವತ್ತು ಪ್ರತಿಭಟನೆ ಇಟ್ಟುಕೊಂಡಿದ್ದಿರಿಂದ ಈ ಕಾರ್ಯಕ್ರಮವನ್ನು ಬದಲಾವಣೆ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಈ ಹೋರಾಟದಲ್ಲಿ ರಂಗಸ್ವಾಮಿ, ಮಹೇಶ್, ಕುಮಾರ್ ಹಾಗೂ ರೈತ, ದಲಿತ ಸಂಘರ್ಷಸಮಿತಿ ಮುಖಂಡರು, ಎ.ಇ.ಇ ತಾರಾನಾಥ್, ಎ.ಇ. ಅಂಕಿತ ಭಾರ್ಗವ್, ಹಳೇಬೀಡಿನ ಪಿಎಸ್‌ಐ ಮಂಜುನಾಥ್ ಮತ್ತು ಸಿಬ್ಬಂದಿಯಿಂದ ಯಾವುದೇ ಗಲಾಟೆಯಾಗದೇ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.