ಬಳ್ಳಾರಿ: ಮಹಿಳಾ ಮೀಸಲಾತಿ ಮಸೂದೆ ಜಾರಿ ವಿರೋಧಿಸುವ ಮೂಲಕ ಕಾಂಗ್ರೆಸ್ ಮಹಿಳಾ ಸಮುದಾಯಕ್ಕೆ ಅವಮಾನ ಎಸಗಿದೆ ಎಂದು ಆರೋಪಿಸಿ ಜೆಡಿಎಸ್‌ನ ಮಹಿಳಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ವಿರೋಧಿ ಧೋರಣೆ ಹೊಂದಿರುವ ಕಾಂಗ್ರೆಸ್ ಇದೀಗ ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ವಿರೋಧಿಸುವ ಮೂಲಕ ತನ್ನ ನೀಚ ಸಂಸ್ಕೃತಿ ಪ್ರದರ್ಶಿಸಿದೆ. ಪ್ರಜಾಪ್ರಭುತ್ವ ಹಾಗೂ ಮಹಿಳೆಯರಿಗೆ ಅವಮಾನ ಮಾಡಿದೆ.
ಪುರುಷರಷ್ಟೇ ಮಹಿಳೆಯರೂ ಸಬಲರು. ಜನಸಂಖ್ಯೆಯಲ್ಲೂ ಸುಮಾರು ಶೇ 50ರಷ್ಟು ಇರುವ ಮಹಿಳೆಯರಿಗೂ ಸಮಪಾಲು ಸಿಗಬೇಕು. ಆದರೆ, ಮಸೂದೆ ಜಾರಿಗೆ ವಿರೋಧಿಸುತ್ತಿರುವುದು ಖಂಡನೀಯ. ಮಹಿಳೆಯರು ಜಾಗೃತರಾಗಿ ಕಾಂಗ್ರೆಸ್ ವಿರುದ್ಧ ತಿರುಗಿಬೀಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಜೆಡಿಎಸ್ ಪಕ್ಷವು ದೇವೇಗೌಡ ಹಾಗೂ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುತ್ತಿದೆ. ಮಹಿಳೆಯೇ ಜೆಡಿಎಸ್ ಪಕ್ಷದ ಚಿಹ್ನೆ. ಆದರೆ, ಮಹಿಳೆಯರನ್ನು ಅಧಿಕಾರದಿಂದ ದೂರವಿಡಬೇಕು ಎಂಬುದು ಕಾಂಗ್ರೆಸ್‌ನ ಸಿದ್ಧಾಂತವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಏಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಪ್ರಶ್ನಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾ, ಜಿಲ್ಲಾ ಪ್ರಮುಖರಾದ ಜಮೀಲಾ, ಶಬಾನಾ, ವಸಂತಮ್ಮ, ವರಲಕ್ಷ್ಮೀ, ರಾಜೇಶ್ವರಿ, ಶಿವಗಂಗಾ, ತಮೀಮ್ ಸೇರಿದಂತೆ ಪಕ್ಷದ ಮಹಿಳಾ ಘಟಕದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.