ವಿದ್ಯುತ್‌ ಟವರ್‌ ನಿರ್ಮಾಣ ವಿರೋಧಿಸಿ ಪ್ರತಿಭಟನೆ

KannadaprabhaNewsNetwork | Published : Jul 12, 2024 1:35 AM

ಸಾರಾಂಶ

ಕಣಿವೆಹಳ್ಳಿ ಗ್ರಾಮದ ಹರಿಜನ ಕಾಲನಿಯ ಮಹಿಳೆಯರು ಯುವಕರು ವಿದ್ಯುತ್ ಟವರ್ ನಿರ್ಮಾಣ ಕೆಲಸ ನಿಲ್ಲಿಸಿ ಪ್ರತಿಭಟನೆ ಮಾಡಿದರು.

ಹರಪನಹಳ್ಳಿ: ವಿದ್ಯುತ್ ಲೈನ್ ಗಳು ಮನೆಗಳ ಮೇಲ್ಬಾಗ ಹಾದು ಹೋಗುವುದರಿಂದ ನಮಗೆ ಸಮಸ್ಯೆಯಾಗುತ್ತದೆ ಎಂದು ವಿದ್ಯುತ್‌ ಟವರ್‌ ನಿರ್ಮಾಣ ವಿರೋಧಿಸಿ ತಾಲೂಕಿನ ಕಣವಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕಣಿವೆಹಳ್ಳಿ ಗ್ರಾಮದ ಹರಿಜನ ಕಾಲನಿಯ ಮಹಿಳೆಯರು ಯುವಕರು ವಿದ್ಯುತ್ ಟವರ್ ನಿರ್ಮಾಣ ಕೆಲಸ ನಿಲ್ಲಿಸಿ ಪ್ರತಿಭಟನೆ ಮಾಡಿದರು. 45 ವರ್ಷಗಳ ಹಿಂದೆ ವಿದ್ಯುತ್ ಇಲಾಖೆ ನಿರ್ಮಿಸಿದ ಹೈ ವೋಲ್ಟೇಜ್ ಟವರ್ ಶಿಥಿಲಗೊಂಡಿವೆ. ಈ ಟವರ್ ಗಳ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಈ ಹಿಂದೆ ಇದ್ದ ಟವರ್ ಕೇವಲ 3 ಲೈನುಗಳಲ್ಲಿ ಹಾದು ಹೋಗಿತ್ತು. ಈಗ ನಿರ್ಮಾಣಗೊಳ್ಳುತ್ತಿರುವ ಟವರ್ ನ ಗಾತ್ರ ದೊಡ್ಡದಾಗಿದ್ದು ಆರು ಲೈನ್ ಗಳು ಏಕಕಾಲಕ್ಕೆ ನಿರ್ಮಾಣ ಆಗುತ್ತಿವೆ. ಇಲ್ಲಿ ಕನಿಷ್ಠ ನೂರು ದಲಿತ ಕುಟುಂಬಗಳು ವಾಸ ಮಾಡುತ್ತಿವೆ ಎಂದರು.

ಈ ಹಿಂದೆ ವಿದ್ಯುತ್ ಟವರ್ ನಿರ್ಮಾಣದ ಪೂರ್ವದಲ್ಲಿಯೇ ಸರ್ಕಾರ ಇವರಿಗೆ ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಾಣ ಮಾಡಿ ಕೊಟ್ಟಿರುತ್ತದೆ ಆದರೆ ಈಗ ಈ ಟವರ್ ನಿರ್ಮಾಣದಿಂದ ವಿದ್ಯುತ್ ಲೈನ್ ಸಂಪರ್ಕ ದಲಿತ ಕಾಲೋನಿಯ ಮೇಲೆ ಹಾದು ಹೋಗುತ್ತದೆ.

ಪರಿಣಾಮ ಮಳೆಗಾಲದಲ್ಲಿ ಬೆಂಕಿಯ ಕಿಡಿಗಳು ಮನೆಗಳ ಮೇಲೆ ಬೀಳುತ್ತವೆ. ಮನೆಗಳಲ್ಲಿ ಬಲ್ಪ್ ಗಳು, ಟಿವಿ ಮುಂತಾದ ಎಲೆಕ್ಟ್ರಿಕಲ್ ಸಾಮಗ್ರಿಗಳು ಸುಟ್ಟು ಹೋಗುತ್ತವೆ, ರಾತ್ರಿ ಎಲ್ಲಾ ಲೈನ್‌ ಗಳಲ್ಲಿ ಬರುವ ವಿದ್ಯುತ್ ಶಬ್ದಕ್ಕೆ ನಿದ್ದೆ ಮಾಡುವುದು ಕಷ್ಟವಾಗಿದೆ ಅಲ್ಲದೇ ಅಪ್ಪಿತಪ್ಪಿ ಈ ಟವರ್‌ನ ವಿದ್ಯುತ್ ಲೈನ್ ಹರಿದು ಬಿದ್ದರೆ ಇಡೀ ಕಾಲೋನಿಯ ಎಲ್ಲ ಮನೆಗಳು ಗಂಭೀರ ಹಾನಿಗೊಳಗಾಗುವ ಸಂಭವವಿದೆ. ಇಲಾಖೆಯು ಟವರ್ ಗಳನ್ನು ಮನೆಗಳಿಂದ ದೂರ ನಿರ್ಮಿಸಬೇಕೆಂದು ಸಂಬಂಧ ಪಟ್ಟ ಗುತ್ತಿಗೆದಾರರು ಹಾಗೂ ಜೆ ಇ ಗಳಿಗೆ ಬೇಡಿಕೆ ಇಟ್ಟಿದ್ದಾರೆ ಯಾವುದೇ ಕಾರಣಕ್ಕೂ ಮನೆಗಳ ಮೇಲೆ ವಿದ್ಯುತ್ ಲೈನ್ ಹಾದು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಪ್ರತಿಭಟನೆಯಲ್ಲಿ ಎಸ್.ನಿಂಗಪ್ಪ, ಎಂ.ಶಿವರಾಜ್ ಇಟಿಗಿ, ಹನುಮಂತಪ್ಪ, ಕವಿತ ಬಸಾಪುರ, ದುರುಗಮ್ಮ ಉಪರ್ ಗಟ್ಟಿ, ಕೋಟೆಪ್ಪ ಮಾಡ್ಲಿಗೇರಿ, ಉಚ್ಚಂಗೆಮ್ಮ, ಎಚ್.ಹೊನ್ನಪ್ಪ, ಐ.ರೂಪ, ಎಂ.ಯರಿಯಮ್ಮ, ಎಂ.ಮಾಯಮ್ಮ, ಮಾಡ್ಲಿಗೇರಿ ಕಾಳಪ್ಪ, ಮಾಡ್ಲಿಗೇರಿ ರಮೇಶ, ಸೊನ್ನದ ಗಿರೀಶ ಪಾಲ್ಗೊಂಡಿದ್ದರು.

Share this article