ಹೂವಿನಹಡಗಲಿ: ನರೇಗಾ ಹಬ್ಬದ ನೆಪದಲ್ಲಿ ತಾಲೂಕಿನ ಎಲ್ಲ ಗ್ರಾಪಂ ಪಿಡಿಒಗಳು, ನರೇಗಾ ಸಿಬ್ಬಂದಿ ತಾಪಂ ಕಚೇರಿಯ ಸಭಾಂಗಣದಲ್ಲಿ ನೃತ್ಯ ಮಾಡುವ ಮೂಲಕ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ, ವಿವಿಧ ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಇಲ್ಲಿನ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಲ್ಲಿ ಆಯೋಜಿಸಿದ್ದ, ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡ ಸುರೇಶ ಹಲಗಿ ಮಾತನಾಡಿ, ನರೇಗಾ ದಿನಾಚರಣೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನರೇಗಾ ಕಾಮಗಾರಿಯ ಹಬ್ಬ ಆಚರಿಸುವ ನೆಪದಲ್ಲಿ, ತಾಪಂ ಕಚೇರಿಯ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಪಂ ಇಒ ಉಮೇಶ, ನರೇಗಾ ಎಡಿ ವೀರಣ್ಣನಾಯ್ಕ ಅವರ ಸಮ್ಮುಖದಲ್ಲಿ ನರೇಗಾ ಸಿಬ್ಬಂದಿ ನೃತ್ಯ ಮಾಡಿದ್ದು, ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ ಎಂದರು.ನರೇಗಾ ದಿನಾಚರಣೆ ಪ್ರಶಸ್ತಿ ಪ್ರದಾನ ಸಮಾರಂಭ ಚಿತ್ರಗೀತೆಯ ಹಾಡಿಗೆ, ಡ್ಯಾನ್ಸ್ ಮಾಡುವ ಮೂಲಕ ಡ್ಯಾನ್ಸ್ ಕ್ಲಬ್ ಆಗಿ ಸರ್ಕಾರಿ ಕಚೇರಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನರೇಗಾ ಯೋಜನೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದಾರೆ. ಒಂದು ರಾಷ್ಟ್ರೀಯ ಕಾರ್ಯಕ್ರಮ ಹೆಸರಿನಲ್ಲಿ ಈ ರೀತಿ ಸರ್ಕಾರಿ ಕಚೇರಿ ಬಳಸಿಕೊಂಡಿರುವುದು ಕಾನೂನು ಬಾಹಿರವಾಗಿದೆ ಎಂದು ದೂರಿದರು.
ಈ ರೀತಿ ಸರ್ಕಾರಿ ಕಚೇರಿ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದುರ್ದೇಶ ಹೊಳಗುಂದಿ, ಜಿ. ಮೆಹಬೂಬ್ ಬಾಷ, ಶಬೀರ್ ಬಾಷ, ಸುರೇಶ ಹೊಳಗುಂದಿ, ಎಚ್. ದಂಡೆಮ್ಮ, ಟಿ. ದೇವೇಂದ್ರಪ್ಪ, ಡಿ. ಮುಕುಂದಗೌಡ, ಹೊಳಗುಂದಿ ದುರುಗೇಶ, ಎಂಟಮನಿ ಭರಮಪ್ಪ, ಕೆ. ಮರಿಯಪ್ಪ ಇತರರು ಕಂದಾಯ ಇಲಾಖೆಯ ಸಲೀಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.