ಕನ್ನಡಪ್ರಭ ವಾರ್ತೆ ಹಾಸನ
ಕಾಂಗ್ರೆಸ್ ಪಕ್ಷದ ಅಜೆಂಡಾದಲ್ಲಿ ಏನಾದರೂ ದತ್ತಪೀಠವನ್ನು ನಮ್ಮ ವಕ್ಫ್ ಬೋರ್ಡಿನ ಆಸ್ತಿ ಎಂದು ಹೇಳಿದರೆ ಇಡೀ ರಾಜ್ಯಾದ್ಯಂತ ಬಹುಸಂಖ್ಯಾತ ಹಿಂದೂಗಳು ಶ್ರೀರಾಮಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಒಂದು ಲಕ್ಷ ಜನ ಸೇರಿ ಬಾಬನ ದರ್ಗಾವನ್ನು ಕಿತ್ತೆಸೆಯುವ ಹೋರಾಟ ಮಾಡುವುದಾಗಿ ಶ್ರೀರಾಮಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ್ ಮತ್ತು ಜಿಲ್ಲಾಧ್ಯಕ್ಷ ಹೇಮಂತ್ ಜಾನೆಕೆರೆ ಎಚ್ಚರಿಸಿದರು.ಪ್ರತಿವರ್ಷದಂತೆ ಈ ವರ್ಷವೂ ಕೂಡ ನೂರಾರು ಜನರು ಚಿಕ್ಕಮಗಳೂರಿನ ದತ್ತಪೀಠಕ್ಕೆ ಪ್ರಯಾಣ ಬೆಳೆಸುವ ಮೊದಲು ಭಾನುವಾರ ಬೆಳಿಗ್ಗೆ ನಗರದ ಎಂ.ಜಿ. ರಸ್ತೆ ಬಳಿ ಇರುವ ದತ್ತಾತ್ರೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಶ್ರೀರಾಮಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ್ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ 21 ವರ್ಷಗಳಿಂದಲೂ ದತ್ತಮಾಲೆ ಅಭಿಯಾನವನ್ನು ನಡೆಸುವ ಮೂಲಕ ಹೋರಾಟ ನಡೆಸಲಾಗುತ್ತಿದೆ. ಈ ವರ್ಷ ಅದ್ಧೂರಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯದಿಂದ ಚಿಕ್ಕಮಗಳೂರುಗೆ ಒಟ್ಟಾಗಿ ಸೇರುತ್ತಿದ್ದೇವೆ. ಪ್ರಮೋದ್ ಮುತಾಲಿಕ್, ಸ್ವಾಮೀಜಿಯವರು ಹಾಗೂ ಅವಧೂತ ದತ್ತಾತ್ರೇಯ ಗುರುಗಳು, ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ಹಲವಾರು ಗಣ್ಯರು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಶಕ್ತಿ ಪ್ರದರ್ಶನದ ಹೋರಾಟ ಮಾಡಲಾಗುತ್ತಿದೆ. ಇಲ್ಲಿರುವ ಗೋರಿಗಳು ಆದಷ್ಟು ತೆರವು ಕಾರ್ಯ ಮಾಡಬೇಕು. ದತ್ತಾತ್ರೇಯ ಪೀಠ ಹಿಂದೂಗಳ ಪೀಠ ಆಗಬೇಕು ಎನ್ನುವ ಬೇಡಿಕೆಯನ್ನಿಟ್ಟುಕೊಂಡು ದತ್ತಮಾಲಾ ಅಭಿಯಾನವನ್ನು ಪ್ರಾರಂಭ ಮಾಡಲಾಗುತ್ತಿದೆ ಎಂದರು.ಹಾಸನ ಜಿಲ್ಲೆಯಿಂದ ಶ್ರೀರಾಮಸೇನೆ ಅಧ್ಯಕ್ಷರಾದ ಹೇಮಂತ್ ನೇತೃತ್ವದಲ್ಲಿ ಇಲ್ಲಿಂದ ಮುನ್ನೂರಕ್ಕೂ ಹೆಚ್ಚಿನ ಕಾರ್ಯಕರ್ತರು ಸಾಂಕೇತಿಕವಾಗಿ ನಗರದ ಎಂಜಿ. ರಸ್ತೆ ಬಳಿ ಧ್ಯಾನ ಮಂದಿರದ ಆವರಣದಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಾವು ಕೂಡ ಚಿಕ್ಕಮಗಳೂರುಗೆ ಪ್ರಯಾಣ ಬೆಳೆಸಿದ್ದೇವೆ. ದತ್ತಪೀಠ ವಿಚಾರವಾಗಿ ಎಲ್ಲಾ ದಾಖಲೆಗಳು ನಮ್ಮ ಪರವಾಗಿ ಇದ್ದರೂ ಕೋರ್ಟ್ನಲ್ಲಿ ಕೇಸು ನಡೆಯುತ್ತಿದೆ. ಅಯೋಧ್ಯೆ ಪಡೆಯಲು ಸುಮಾರು 200 ವರ್ಷಗಳ ಕಾಲ ಹೋರಾಟ ನಡೆಯಿತು. ಈಗ ರಾಮ ಮಂದಿರ ನಿರ್ಮಾಣವಾಗಿದೆ. ಅದೇ ಮಾದರಿಯಲ್ಲಿ ಇದನ್ನು ಕೂಡ ಹೋರಾಟವಾಗಿ ತೆಗೆದುಕೊಂಡಿದ್ದು, ಸುಪ್ರೀಂಕೋರ್ಟಿನಲ್ಲಿ ಪ್ರಕರಣ ನಡೆಯುತ್ತಿದ್ದು, ಆದಷ್ಟು ಬೇಗ ಅಲ್ಲಿರುವ ಗೋರಿಗಳು ತೆರವಾಗಿ ದತ್ತಪೀಠ ಹಿಂದೂಗಳ ಪೀಠವಾಗಿ ಇನ್ನೆರಡು ವರ್ಷಗಳಲ್ಲಿ ಆಗುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಕ್ಫ್ ಮೂಲಕ ಭೂ ಕಬಳಿಕೆ ಎಲ್ಲೆಡೆ ಆಗುತ್ತಿದೆ. ಬಾಬ ಬುಡನಗಿರಿ ಎಂದು ಸೃಷ್ಠಿ ಮಾಡಿದ್ದು, ದತ್ತಪೀಠವನ್ನು ಕಬಳಿಕೆಗೆ ಯಾವ ಕಾರಣಕ್ಕೂ ಬಿಡುವುದಿಲ್ಲ. ಕಾನೂನು ಮೂಲಕ ಜಯಗಳಿಸುತ್ತೇವೆ. ಏನಾದರೂ ಕೋರ್ಟಿನಲ್ಲಿ ಹಿನ್ನಡೆಯಾದರೇ ಮುಂದಿನ ಹೋರಾಟವನ್ನು ಶ್ರೀರಾಮಸೇನೆಯಿಂದ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಹೇಮಂತ್ ಜಾನೆಕೆರೆ ಮಾತನಾಡಿ, ಶ್ರೀರಾಮಸೇನೆ ರಾಜ್ಯ ಸಂಘಟನೆಯಿಂದ ಚಿಕ್ಕಮಗಳೂರಿನ ದತ್ತಪೀಠ ಕಾರ್ಯಕ್ರಮದ ಉದ್ದೇಶ ಇಲ್ಲಿರುವ ಬಾಬನ ದರ್ಗಾಗಳು ಏನಿದೆ ಕೂಡಲೇ ತೆರವು ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಇಡೀ ರಾಜ್ಯದಿಂದ ದತ್ತಪೀಠಕ್ಕೆ ಹೊರಟಿದ್ದು, ವಕ್ಫ್ ಬೋರ್ಡ್‌ನ ಆಸ್ತಿ ಎಂದು ರಾಜ್ಯದಲ್ಲಿ ಹೇಳಲಾಗುತ್ತಿದ್ದು, ಏನಾದರೂ ದತ್ತಪೀಠವನ್ನು ನಮ್ಮ ವಕ್ಫ್ ಬೋರ್ಡಿನ ಆಸ್ತಿ ಎಂದು ಹೇಳಿದ್ದೆ ಆದರೇ ಇಡೀ ರಾಜ್ಯಾದ್ಯಂತ ಬಹುಸಂಖ್ಯಾತ ಹಿಂದೂಗಳು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಒಂದು ಲಕ್ಷ ಜನ ಸೇರಿ ಬಾಬನ ದರ್ಗಾವನ್ನು ಕಿತ್ತೆಸೆಯುವುದು ದೊಡ್ಡ ಅಜಂಡಾವಾಗಿದೆ ಎಂದು ಎಚ್ಚರಿಸಿದರು.
ವಕ್ಫ್ ಬೋರ್ಡಿನ ಕಾಂಗ್ರೆಸ್ ಅಜೆಂಡಾಕ್ಕೆ ಮೊರೆ ಹೋಗಿ ಅಲ್ಪಸಂಖ್ಯಾತರ ಮೊರೆ ಹೋಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ರಾಜಕಾರಣಿಗಳ ಮಾಡುವ ಸಂದರ್ಭವನ್ನು ಹಿಂದೂ ಮತದಾರರು ನೋಡಬೇಕಾಗಿದೆ. ಹಿಂದೂಗಳೆಲ್ಲಾ ಒಗ್ಗಟ್ಟಾಗಿ ಬಾಬಾನ ದರ್ಗಾವನ್ನು ಕಿತ್ತು ಎಸೆಯುವುದೇ ನಮ್ಮ ಹೋರಾಟದ ಗುರಿಯಾಗಬೇಕು ಎಂದು ತಮ್ಮ ನಿರ್ಧಾರ ತಿಳಿಸಿದರು.ಇದೇ ವೇಳೆ ಶ್ರೀರಾಮಸೇನೆಯ ಕಾರ್ಯಾಧ್ಯಕ್ಷ ಮಹೇಶ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೆ.ಕೆ. ಪುನೀತ್, ಜಿಲ್ಲಾ ಅಸಂಘಟನಾ ಕಾರ್ಯದರ್ಶಿ ಮನು ಜಗತ್, ಜಿಲ್ಲಾ ಕಾರ್ಯದರ್ಶಿ ಧರ್ಮ ನಾಯಕ್, ನಗರ ಅಧ್ಯಕ್ಷ ಅರುಣ್, ತಾಲೂಕು ಪ್ರದೀಪ್, ವಿದ್ಯಾರ್ಥಿ ಮುಖಂಡ ಅಭಿಲಾಶ್, ಕುಮಾರ್ ಯಡಿಯೂರು, ಇತರರು ಉಪಸ್ಥಿತರಿದ್ದರು.