-ದಲಿತ ಹಕ್ಕುಗಳ ಜಿಲ್ಲಾ ಸಂಘಟನಾ ಸಮಿತಿ ಸಭೆ
------ಕನ್ನಡಪ್ರಭ ವಾರ್ತೆ ಶಹಾಪುರ
ರಾಜ್ಯದ ವಿವಿಧೆಡೆ ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೌನ ವಹಿಸಿವೆ. ಸ್ಥಳೀಯವಾಗಿ ಪೊಲೀಸ್ ಇಲಾಖೆ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ದೌರ್ಜನ್ಯ ಎಸಗಿದವರ ಮೇಲೆ ಕ್ರಮಕೈಗೊಳ್ಳುತ್ತಿಲ್ಲ. ದಲಿತರ ಸೌಲಭ್ಯಗಳಿಗೆ ಕತ್ತರಿ ಹಾಕುವ ಮೂಲಕ ಸರ್ಕಾರಗಳು ಇವರಿಗೆ ವಂಚಿಸುತ್ತಿವೆ. ಸರ್ಕಾರದ ದಲಿತ ವಿರೋಧಿ ನೀತಿ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಹಕ್ಕುಗಳನ್ನು ಪಡೆಯುತ್ತೇವೆ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಾಜಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ನಗರದ ಸರಕಾರಿ ನೌಕರರ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ದಲಿತ ಹಕ್ಕುಗಳ ಸಂಘಟನಾ ಸಮಿತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದಲಿತರ ಮೇಲೆ ಹಲ್ಲೆ, ಅಸ್ಪೃಶ್ಯತಾ ಆಚರಣೆ ಜಾರಿಯಲ್ಲಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಇದನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿವೆ. ತಕ್ಷಣ ಸರ್ಕಾರ ದಲಿತರ ವಿಶೇಷ ಸಭೆ ಕರೆದು ಮುಂದೆ ಬರುವ ಅಧಿವೇಶನದಲ್ಲಿ ಚರ್ಚೆ ಮಾಡಿ ದೌರ್ಜನ್ಯ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದರು.ಇತ್ತೀಚೆಗೆ ಕೊಪ್ಪಳದಲ್ಲಿ ಸಂಗನಹಾಳ ಗ್ರಾಮದಲ್ಲಿ ಕ್ಷೌರ ಮಾಡಿಸಿಕೊಳ್ಳಲು ಹೋದ ದಲಿತ ಯುವಕನನ್ನು ಕೊಲೆಗೈದಿದ್ದು, ಅಮಾನವೀಯ ಘಟನೆ. ರಾಜ್ಯದ ನಾನಾ ಭಾಗದಲ್ಲಿ ಈ ರೀತಿಯ ದೌರ್ಜನ್ಯಗಳು ನಿತ್ಯ ನಡೆಯುತ್ತಿದೆ. ಪ್ರತಿ ಮೂರು ಗಂಟೆಗೆ ಒಬ್ಬ ದಲಿತರ ಹತ್ಯೆಯಾಗುತ್ತಿದ್ದರೆ, ಪ್ರತಿ ಎರಡೂವರೆ ತಾಸಿನಲ್ಲಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ವರದಿಯಾಗುತ್ತಿರುವುದು ಕಳವಳಕಾರಿ ಅಂಶ ಎಂದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ, ಪರಿಶಿಷ್ಟರ ಅಭಿವೃದ್ಧಿಗಾಗಿ 39,121 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಿದ್ದೇವೆಂದು ಹೇಳಿರುವುದು ಮುಖ್ಯಮಂತ್ರಿಯವರ ಟೊಳ್ಳು ಘೋಷಣೆಯಾಗಿದೆ. ಇದೇ ಸಭೆಯಲ್ಲಿ ಎಸ್.ಸಿ.ಪಿ.ಟಿ.ಎಸ್.ಪಿ ಉಪಯೋಜನೆಯ ಹಣದಲ್ಲಿ 14,282.38 ಕೋಟಿಯನ್ನು 5 ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತೇವೆ, ದಲಿತರೂ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ನಿಜ, ಆದರೆ, ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆ ಈಡೇರಿಸಲು ಬಡ ದಲಿತರ ಹಣವೇ ಬೇಕಿತ್ತೇ? ‘ಸಾಮಾಜಿಕ ನ್ಯಾಯ’ದ ಪರವಾಗಿದ್ದೇನೆಂದು ಹೇಳುವ ನೀವೂ ಇಂತ ಹೀನಾಯ ಕೆಲಸಕ್ಕೆ ಇಳಿಯಬಾರದಾಗಿತ್ತು. ಪರಿಷತ್ ಸಭೆಯಲ್ಲಿ 14,282.38 ಕೋಟಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಲು ಹೊರಟಿರುವುದು ದಲಿತರಿಗೆ ವಂಚಿಸುವುದೇ ಆಗಿದೆ ಎಂದು ಆರೋಪಿಸಿದರು.ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎಸ್.ಎಂ. ಸಾಗರ, ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ದಾವಲ್ ಸಾಬ್ ನದಾಫ್, ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ, ಪ್ರಕಾಶ್ ಸುರಪುರ, ನಿಂಗಣ್ಣ ಕುರುಕುಂದ, ರಂಗಮ್ಮ ಕಟ್ಟಿಮನಿ ಸೇರಿದಂತೆ ದಲಿತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಇದ್ದರು.
----23ವೈಡಿಆರ್10: ಶಹಾಪುರ ನಗರದ ಸರಕಾರಿ ನೌಕರರ ಭವನದಲ್ಲಿ ದಲಿತ ಹಕ್ಕುಗಳ ಜಿಲ್ಲಾ ಸಂಘಟನಾ ಸಮಿತಿ ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಾಜಣ್ಣ ಮಾತನಾಡಿದರು.