ಕನ್ನಡಪ್ರಭ ವಾರ್ತೆ ಹಾಸನಹೊಳೆನರಸೀಪುರ ತಾಲೂಕಿನ ಹಾವಿನಮಾರನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವುದರಿಂದ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿ ಗುರುವಾರ ಡಿಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಇದೇ ವೇಳೆ ಗ್ರಾಮದ ಮಹಿಳೆಯರು ಮಾಧ್ಯಮದೊಂದಿಗೆ ಮಾತನಾಡಿ, ಗ್ರಾಮದಲ್ಲಿನ ಕೆಲವು ಅಂಗಡಿಗಳು ಹಾಗೂ ಮನೆಗಳಲ್ಲಿ ಗುಪ್ತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಯುವಕರು ಸೇರಿದಂತೆ ಹಲವು ಮಂದಿ ಮದ್ಯ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಗ್ರಾಮದೊಳಗೆ ಸುಲಭವಾಗಿ ಮದ್ಯ ಸಿಗುತ್ತಿರುವುದರಿಂದ ಮದ್ಯ ಸೇವನೆ ಮಾಡಿದ ಬಳಿಕ ಕೆಲವರು ಆಕ್ರೋಶದಿಂದ ವರ್ತಿಸಿ ಆಗಾಗ್ಗೆ ಗಲಾಟೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಇದರ ಪರಿಣಾಮವಾಗಿ ಕುಟುಂಬಗಳಲ್ಲಿ ಶಾಂತಿ ಕದಡಲ್ಪಡುತ್ತಿದೆ ಎಂದರು. ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ಮದ್ಯ ವ್ಯಸನದ ಕಾರಣದಿಂದಾಗಿ ಕೆಲ ಕುಟುಂಬಗಳಲ್ಲಿ ಪ್ರತಿದಿನ ಕಲಹಗಳು ಉಂಟಾಗುತ್ತಿದ್ದು, ಗ್ರಾಮದಲ್ಲಿ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ಉಂಟಾಗಿದೆ. ಹಲವರು ದಿನನಿತ್ಯದ ಕೆಲಸವನ್ನು ಕಡೆಗಣಿಸಿ ಮದ್ಯ ಸೇವನೆಗೆ ಒಳಗಾಗುತ್ತಿರುವುದು ಕುಟುಂಬಗಳ ಆರ್ಥಿಕ ಸ್ಥಿತಿಗೂ ಹೊಡೆತ ನೀಡುತ್ತಿದೆ ಎಂದು ದೂರಿದರು.ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಂಗಡಿ ಮತ್ತು ಮನೆಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ಕಟ್ಟುನಿಟ್ಟಾಗಿ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹವಾಗಿದೆ ಎಂದು ಹೇಳಿದರು. ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಂಡು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಗ್ರಾಮಸ್ಥರಿಗೆ ಸುರಕ್ಷಿತ ಹಾಗೂ ಶಾಂತ ವಾತಾವರಣ ಒದಗಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಗ್ರಾಮದ ಶೈಲಾ, ಸೌಮ್ಯ, ಜ್ಯೋತಿ, ಶಶಿಕಲಾ, ರಾಜಮ್ಮ, ನೇತ್ರಾವತಿ, ಸುಮಿತ್ರ, ಭಾಗ್ಯ, ಸಾಕಮ್ಮ, ರತ್ನಮ್ಮ ಇತರರು ಉಪಸ್ಥಿತರಿದ್ದರು.