ದೊಡ್ಡಬಳ್ಳಾಪುರ: ನಗರಸಭೆ ವತಿಯಿಂದ ಕಾಮಗಾರಿಗಳ ಅನುದಾನವನ್ನು ಅಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಲ್ಪಸಂಖ್ಯಾತರು ವಾಸ ಮಾಡುವ ಪ್ರದೇಶಗಳ ಅಭಿವೃದ್ದಿಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಗುರುವಾರ ಇಲ್ಲಿನ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಯಾವುದೇ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಬೇಕಾದರೆ ಶಿಷ್ಟಾಚಾರ ಪಾಲಿಸಬೇಕು. ಆದರೆ ಇದು ಯಾವುದೂ ನಡೆಯುತ್ತಿಲ್ಲ. ಗುತ್ತಿಗೆದಾರರು ಇಚ್ಛಾನುಸಾರ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ, ಕೆಆರ್‌ಐಡಿಎಲ್ ನಡೆಸುತ್ತಿರುವ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ. ಅಲ್ಪಸಂಖ್ಯಾತರು ವಾಸ ಮಾಡದ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಎಕ್ಸಿಕ್ಯೂಟಿವ್ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಫೋನ್ ಕರೆ ಮಾಡಿ ಮಾತಾಡಿದಾಗ ಅವರು ಯಾವುದೇ ರೀತಿಯ ನಿಖರ ಮಾಹಿತಿ ನೀಡಿಲ್ಲ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣಯ್ಯ, ನಗರ ಸಭಾ ಸದಸ್ಯರಾದ ಫಯಾಜ್, ಅಲ್ತಾಫ್, ರೂಪಿಣಿ ಮಂಜುನಾಥ್, ರಜನಿ ಸುಬ್ರಮಣಿ, ನಾಗಮಣಿ, ಮಂಜುಳಾ, ಚಂದ್ರಮೋಹನ್, ಆನಂದ್, ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಮುಖಂಡರಾದ, ಅಖಿಲೇಶ್, ರಾಜಘಟ್ಟ ರವಿ, ವಿಶ್ವಾಸ್ ಗೌಡ, ಜನಪರ ಮಂಜು ಉಪಸ್ಥಿತರಿದ್ದರು.
ನಗರಸಭೆ ಕಾಮಗಾರಿ ಅನುದಾನ ಅಸಮರ್ಪಕ ಹಂಚಿಕೆ ಆರೋಪ ಹಿನ್ನೆಲೆ ದೊಡ್ಡಬಳ್ಳಾಪುರ ನಗರಸಭೆ ಕಚೇರಿ ಮುಂದೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.