ಗಂಗಾವತಿ ಉಪವಿಭಾಗಕ್ಕೆ ಕುಷ್ಟಗಿ ಸೇರ್ಪಡೆ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Oct 06, 2024, 01:20 AM IST
ಪೋಟೊ5ಕೆಎಸಟಿ1: ಕುಷ್ಟಗಿ ಪಟ್ಟಣದಲ್ಲಿ ನಡೆದ ಪ್ರತಿಭಟನಾ ರ್ಯಾಲಿಗೆ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು. | Kannada Prabha

ಸಾರಾಂಶ

ತಾಲೂಕನ್ನು ಗಂಗಾವತಿ ಉಪವಿಭಾಗಕ್ಕೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ಹೈದ್ರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕನ್ನು ಗಂಗಾವತಿ ಉಪವಿಭಾಗಕ್ಕೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ಹೈದ್ರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನಾ ರ್‍ಯಾಲಿಗೆ ಕುಷ್ಟಗಿ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿ ಮಾತನಾಡಿ, ಕುಷ್ಟಗಿ ಗಂಗಾವತಿ ಉಪವಿಭಾಗಕ್ಕೆ ಸೇರ್ಪಡೆಗೊಂಡರೆ ತಾಲೂಕಿನ ಹನಮಸಾಗರ ಹಾಗೂ ಹನುಮನಾಳ ಭಾಗದ ಹಳ್ಳಿಗಳಿಗೆ ತೊಂದರೆಯಾಗುತ್ತದೆ. ಆದ ಕಾರಣ ಈ ಪ್ರಸ್ತಾವನೆಯನ್ನು ಇಲ್ಲಿಗೆ ಕೈ ಬಿಡಬೇಕು ಅಥವಾ ಕುಷ್ಟಗಿ ತಾಲೂಕನ್ನು ಉಪವಿಭಾಗವನ್ನಾಗಿ ಮಾಡಿದರೆ ಉಳಿದ ತಾಲೂಕಿಗೂ ಅನುಕೂಲವಾಗಲಿದೆ ಎಂದರು.

ಹೈದ್ರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ ಮಾತನಾಡಿ, ಗಂಗಾವತಿಯು ನಮ್ಮ ಕುಷ್ಟಗಿ ತಾಲೂಕಿನ ಕೊನೆಯ ಗ್ರಾಮದಿಂದ ಸುಮಾರು 120ಕ್ಕೂ ಅಧಿಕ ಕಿಮೀ ದೂರವಿದೆ. ಗಂಗಾವತಿ ಉಪವಿಭಾಗಕ್ಕೆ ಕುಷ್ಟಗಿ ಸೇರ್ಪಡೆಗೊಂಡರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ. ಗಂಗಾವತಿಯ ಉಪವಿಭಾಗಕ್ಕೆ ಕುಷ್ಟಗಿ ಸೇರ್ಪಡೆಯ ಪ್ರಸ್ತಾವನೆ ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ಪ್ರಮುಖರಾದ ದೊಡ್ಡಬಸನಗೌಡ ಬಯ್ಯಾಪೂರ, ಎಸ್.ಜಿ. ಪಾಟೀಲ, ಫಕೀರಪ್ಪ ಚಳಗೇರಿ, ಕಲ್ಲೇಶ ತಾಳದ, ದೇವೇಂದ್ರಪ್ಪ ಬಳೂಟಗಿ, ಟಿ. ಬಸವರಾಜ, ಭೀಮನಗೌಡ ಜಾಲಿಹಾಳ, ಹಂಪನಗೌಡ ಬಳೂಟಗಿ, ಜೆ.ಜಿ. ಆಚಾರ, ವಸಂತ ಮೇಲಿನಮನಿ, ಸುಖರಾಜ ತಾಳಕೇರಿ, ಎ.ವೈ. ಲೋಕರೆ, ನಾಗಪ್ಪ ಸೂಡಿ, ಅಮರೇಗೌಡ ಪಾಟೀಲ್, ಆರ್.ಕೆ. ದೇಸಾಯಿ, ಅಣ್ಣೀರಯ್ಯ ಹಿರೇಮಠ, ಶಿವಸಂಗಪ್ಪ ಬಿಜಕಲ್, ಮಲ್ಲಿಕಾರ್ಜುನ ಬಂಡೇರ, ಟಿ. ಕೃಷ್ಣಮೂರ್ತಿ, ಹುಸೇನ್ ಕಾಯಿಗಡ್ಡಿ, ಯಮನೂರಪ್ಪ ಮಡಿವಾಳ, ಅನಂತಕುಮಾರ್ ನಾಯಕ್, ಭಾಷಾ ಡಿ., ಮಹಾಂತಯ್ಯ ಅರಳಲೇಮಠ, ಶಿವಕುಮಾರ ಗಂಧದ ಮಠ ಸೇರಿದಂತೆ ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ