ತಿಪಟೂರು: ಯುವ ಪೀಳಿಗೆ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಕವನ, ಕಾವ್ಯ, ಕವಿತೆಗಳನ್ನು ಬರೆಯುವುದನ್ನು ರೂಢಿಸಿಕೊಂಡು ಉತ್ತಮ ಕವಿಗಳಾಗಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಟಿ.ಎಸ್.ನಾಗರಾಜಶೆಟ್ಟರು ಹೇಳಿದರು.
ಶಸಾಪ ತಾ.ಅಧ್ಯಕ್ಷ ಪಿ.ಆರ್.ಗುರುಸ್ವಾಮಿ ಮಾತನಾಡಿ, ಉದಯೋನ್ಮುಖ ಕವಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ಅನುಭವಿಸಿ ಬರೆದ ಕವನ ಅರ್ಥಪೂರ್ಣವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪೊಲೀಸ್ ಉಪಾಧೀಕ್ಷಕ ವೀರಭದ್ರಪ್ಪ ಮಾತನಾಡಿ, ಕವಿಗಳು, ಲೇಖಕರು ಭಾವನಾ ಪ್ರಪಂಚದಿಂದ ಹೊರಬಂದು ಬದುಕಿನ ವಾಸ್ತವಿಕತೆಯನ್ನು ತೆರೆದಿಸುವ ಬರವಣಿಗೆ ಮಾಡಬೇಕಿದೆ ಎಂದ ಅವರು, ಇಂದಿನ ಕವಿಗೋಷ್ಠಿಯಲ್ಲಿ ನಾಲ್ಕಾರು ಯುವ ಕವಿಗಳು ಅಂತಹ ಪ್ರಯತ್ನ ಮಾಡಿದ್ದಾರೆ. ನನ್ನ ವೃತ್ತಿಗೂ ಕಾವ್ಯಕ್ಕೂ ದೂರವಾದರೂ ಸಾಹಿತ್ಯ ಅಧ್ಯಯನದಿಂದ ನೆಮ್ಮದಿ, ಶಾಂತಿ, ಆಲೋಚನಾ ಪ್ರವೃತ್ತಿ ಹೆಚ್ಚಾಗಲಿದೆ ಎಂದು ಹೇಳಿದರು.ತಾಲೂಕಿನ ವಿವಿಧ ಭಾಗಗಳಿಂದ ಇಪ್ಪತ್ತನಾಲ್ಕು ಕವಿಗಳು ಭಾಗವಹಿಸಿ ಸ್ವರಚಿತ ಕವನ ವಾಚಿಸಿದರು. ಜಿಲ್ಲಾ ಕಸಾಪ ಆಯೋಜಿಸಿರುವ ದಸರಾ ಕವಿಗೋಷ್ಠಿಗೆ ತಾಲೂಕಿನಿಂದ ರಮ್ಯಶ್ರೀ ಮತ್ತು ಆರ್.ಕೆ.ಶಿವಶಂಕರಪ್ಪರವರನ್ನು ಆಯ್ಕೆ ಮಾಡಲಾಯಿತು.
ದಸರಾ ಮತ್ತು ಯುಗಾದಿ ಕವಿಗೋಷ್ಠಿಗಳನ್ನು ಆಯೋಜಿಸುವ ಮೂಲಕ ಉದಯೋನ್ಮುಖ ಕವಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ತಿಪಟೂರಿನಲ್ಲಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಮತ್ತು ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಎಂ.ಬಸವರಾಜಪ್ಪ, ಕಸಾಪ ತಾ.ಅಧ್ಯಕ್ಷ.