ಎಸ್ಟಿಗೆ ಅನ್ಯ ಸಮುದಾಯಗಳ ಸೇರ್ಪಡೆಗೆ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Sep 25, 2025, 01:01 AM IST
ಹರಪನಹಳ್ಳಿ ಪಟ್ಟಣದಲ್ಲಿ ವಾಲ್ಮೀಕಿ ನಾಯಕ ಸಮುದಾಯದಿಂದ ಎಸ್‌ಟಿಗೆ ಅನ್ಯ ಸಮುದಾಯ ಸೇರ್ಪಡೆಗೊಳಿಸುವುದನ್ನು ವಿರೋಧಿಸಿ ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ನಮ್ಮ ಮೀಸಲಾತಿ ಅನ್ಯ ಸಮಾಜಕ್ಕೆ ಕೊಟ್ಟರೆ ನಾವು ಸಹಿಸುವುದಿಲ್ಲ.

ಹರಪನಹಳ್ಳಿ: ಪರಿಶಿಷ್ಟ ಪಂಗಡಕ್ಕೆ ಅನ್ಯ ಸಮಾಜದವರನ್ನು ಸೇರ್ಪಡೆ ಮಾಡುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ವಾಲ್ಮೀಕಿ ನಾಯಕ ಸಮಾಜ ತಾಲೂಕು ಘಟಕದ ವತಿಯಿಂದ ಹರಪನಹಳ್ಳಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಪಟ್ಟಣದ ಹರಿಹರ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಹೊಸಪೇಟೆ ರಸ್ತೆಯ ಮುಖಾಂತರ ಪ್ರವಾಸಿಮಂದಿರ ವೃತ್ತಕ್ಕೆ ಆಗಮಿಸಿ ಬಹಿರಂಗ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ವೈ.ಡಿ. ಅಣ್ಣಪ್ಪ ಮಾತನಾಡಿ, ವಾಲ್ಮೀಕಿ ನಾಯಕ ಜನಾಂಗಕ್ಕೆ ಸರ್ಕಾರ ಅನ್ಯ ಸಮುದಾಯಗಳನ್ನು ಸೇರಿಸಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಬಾರದು. ಇತರೆ ಸಮುದಾಯಗಳಿಗೆ ಎಷ್ಟಾದರೂ ಸೌಲಭ್ಯ ಕೊಡಿ ಬೇಡ ಎನ್ನುವುದಿಲ್ಲ, ಆದರೆ ನಮ್ಮ ಸಮಾಜದ ಜೊತೆ ಬೇರೆ ಯಾವ ಸಮುದಾಯವನ್ನು ಸೇರಿಸಬಾರದು ಆ ರೀತಿಯಾದರೆ ನಾವು ಸಹಿಸುವುದಿಲ್ಲ ಎಂದು ಹೇಳಿದರು.

ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಹಲುವಾಗಲು ಎಚ್.ಟಿ. ವನಜಾಕ್ಷಿ ಶಿವಯೋಗಿ ಮಾತನಾಡಿ ನಮ್ಮ ಮೀಸಲಾತಿ ಅನ್ಯ ಸಮಾಜಕ್ಕೆ ಕೊಟ್ಟರೆ ನಾವು ಸಹಿಸುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ, ಜಾತಿ ನಡುವೆ ವಿಷಬೀಜ ಬಿತ್ತಲು ಮುಂದಾಗಿದ್ದಾರೆ. ಕೂಡಲೇ ಮೀಸಲಾತಿಯನ್ನು ಹಿಂಪಡೆಯದೆ ಹೋದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ಉದ್ದೇಶಿಸಿ ಮುಖಂಡರಾದ ಎಚ್.ಕೆ. ಹಾಲೇಶ, ಬಸವರಾಜ ಸಂಗಪ್ಪನವರ್, ಪೂಜಾರ ಭೀಮಪ್ಪ, ಆರ್.ಲೊಕೇಶ, ಕಂಚಿಕೇರಿ ಜಯಲಕ್ಷ್ಮಿ, ಶಿರಹಟ್ಟಿ ದಂಡೆಪ್ಪ, ನಿಟ್ಟೂರು ಸಣ್ಣ ಹಾಲಪ್ಪ ಮಾತನಾಡಿದರು.

ನಾಯಕ, ತಳವಾರರ ಹೆಸರಿನಲ್ಲಿ ಇತರೆ ಜಾತಿಯವರಿಗೆ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಹಾಗೆಯೇನಾದರೂ ನಾಯಕ ತಳವಾರ ಜೊತೆಗೆ ಸೇರಿದವರು ವಾಮಮಾರ್ಗದಲ್ಲಿ ಎಸ್‌ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಅಂತಹವರ ಮೇಲೆ ಹಾಗೂ ಅಂತಹ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ಕ್ರಮ ಕೈಗೊಳ್ಳಬೇಕು.

ರಾಜ್ಯದ ವಿವಿಧ ಭಾಗಗಳಲ್ಲಿ ಅಪೂರ್ಣಗೊಂಡಿರುವ ವಾಲ್ಮೀಕಿ ಭವನಗಳನ್ನು ಪೂರ್ಣಗೊಳಿಸಲು ಪರಿಶಿಷ್ಠ ಪಂಗಡದವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಸಹಾಯಧನ, ವಿದ್ಯಾರ್ಥಿವೇತನ ಬಾಕಿ ಬಿಡುಗಡೆಗಾಗಿ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ₹೫೦೦ಕೋಟಿ ಬಿಡುಗಡೆ ಮಾಡಬೇಕು ಎಂದರು.

ಈಗಾಗಲೇ ಗುರುತಿಸಿರುವ ಬ್ಲಾಕ್‌ಲಾಗ್ ಹುದ್ದೆಗಳನ್ನು ತುಂಬುವುದು ಹಾಗೂ ಹೊಸದಾಗಿ ಗುರುತಿಸಬೇಕು, ವಾಲ್ಮೀಕಿ ನಾಯಕ ಜನಾಂಗದ ಮೇಲೆ ನಿರಂತರ ದೌರ್ಜನ್ಯ ಘಟನೆಗಳು ಹೆಚ್ಚಾಗುತ್ತಿದ್ದು ಇಂತಹ ಪ್ರಕರಣಗಳನ್ನು ತಡೆಗಟ್ಟಬೇಕು ಎಂಬುದು ಸೇರಿದಂತೆ 15 ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಶೀಲ್ದಾರ ಬಿ.ವಿ.ಗಿರೀಶಬಾಬು ಅವರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಮುಖಂಡರಾದ ತೆಲಿಗಿ ಉಮಕಾಂತ, ಲಕ್ಷ್ಮಿಚಂದ್ರಶೇಖರ, ವಕೀಲ ಪ್ರಾಣೇಶ್, ನೀಲಗುಂದ ವಾಗೀಶ, ಫಣಿಯಪುರ ಲಿಂಗರಾಜ, ಬಾಣದ ಅಂಜಿನಪ್ಪ, ಹಿರೇಮೆಗಳಗೇರಿ ಹನುಮಂತಪ್ಪ, ಎಚ್.ಕೆ. ಮಂಜುನಾಥ, ಇಟ್ಟಿಗುಡಿ ಅಂಜಿನಪ್ಪ, ಗಿಡ್ಡಹಳ್ಳಿ ನಾಗರಾಜ, ಮಾಗಳದ ಮೃತ್ಯುಂಜಯ, ಗಿರಜ್ಜಿ ನಾಗರಾಜ, ತೆಲಿಗಿ ಯೋಗೀಶ, ಅರುಣ ಪೂಜಾರ, ರಾಯದುರ್ಗದ ಪ್ರಕಾಶ, ಕನಕನಬಸಾಪುರ ಮಂಜುನಾಥ, ಬಾಲೆನಹಳ್ಳಿ ಕೆಂಚನಗೌಡ, ಶಿವರಾಜ, ಗುಂಡಗತ್ತಿ ನೇತ್ರಾವತಿ, ಶೋಭ, ಮಂಜುಳಾ, ರೇಖಮ್ಮ, ಶಾಂತಮ್ಮ, ಮತ್ತಿಹಳ್ಳಿ ಬೆಟ್ಟನಗೌಡ, ವೃಷಬೇಂದ್ರ, ಕಿತ್ತೂರು ಓಬಣ್ಣ, ಚನ್ನಪ್ಪ ಭಾಗವಹಿಸಿದ್ದರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ