ಕನ್ನಡಪ್ರಭ ವಾರ್ತೆ ಶಿರಹಟ್ಟಿ
ಪಟ್ಟಣದ ನೆಹರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಹಾಲು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನೀತಿ ಖಂಡಿಸಿ ಮಾನವ ಸರಪಳಿ ನಿರ್ಮಿಸಿ ಉಗ್ರ ಪ್ರತಿಭಟನೆ ನಡೆಸಿದರು.ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಜನರ ಬದುಕನ್ನು ದುಸ್ತರಗೊಳಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಾಗಿ ನಿತ್ಯ ಬೆಲೆ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆ ಮುಗಿದ ತಕ್ಷಣ ಕಾಂಗ್ರೆಸ್ ಸರ್ಕಾರ ಹಾಲು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಜನವಿರೋಧಿ ನಿಲುವು ತೋರಿದೆ. ಸರ್ಕಾರದ ಈ ಕ್ರಮದಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿದ್ದು, ಬಡಜನತೆ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ತಕ್ಷಣ ಬೆಲೆ ಏರಿಕೆ ಕೈಬಿಡಬೇಕು ಎಂದು ಆಗ್ರಹಿಸಿದರು.ಕೇಂದ್ರ ಬಿಜೆಪಿ ಸರ್ಕಾರ ಕಳೆದ ಕೆಲ ತಿಂಗಳುಗಳಲ್ಲಿ ಮೂರು ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುವುದರ ಮೂಲಕ ಜನಸಾಮಾನ್ಯರಿಗೆ ತೊಂದರೆ ನಿಡುತ್ತಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿರುವ ಜನಸಾಮಾನ್ಯರು ತೈಲ, ಹಾಲು ಬೆಲೆ ಏರಿಕೆಯಿಮದ ಮತ್ತಷ್ಟು ಕಷ್ಟ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರ ಕೂಡಲೆ ಬೆಲೆ ಇಳಿಸಬೆಕು ಎಂದು ಒತ್ತಾಯಿಸಿದರು.
ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಭಯ ಭೀತಿ ಇಲ್ಲದೆ ಕೆಲ ದುಷ್ಕೃತ್ಯಗಳು ನಡೆಯುತ್ತಿವೆ. ಸರ್ಕಾರ ಬಿಗಿ ಇದ್ರೆ ಆಡಳಿತ ಚೆನ್ನಾಗಿರುತ್ತೆ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ರಾಜ್ಯದಲ್ಲಿ ದಿನನಿತ್ಯ ಅಹಿತಕರ ಘಟನೆಗಳು ನಡೆಯುತ್ತಿದ್ದು, ಜನ ಬೇಸತ್ತಿದ್ದಾರೆ ಎಂದು ದೂರಿದರು.
ಗ್ಯಾರೆಂಟಿ ನೆಪದಲ್ಲಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿರುವ ಸರ್ಕಾರದ ನಡೆ ಖಂಡನೀಯ. ದವಸ ಧಾನ್ಯಗಳ ಬೆಲೆ ಗಗನಕ್ಕೆ ಏರುತ್ತಿದೆ. ಕೊಂಡುಕೊಳ್ಳಲು ಸಾಧ್ಯವಾಗದಂತಹ ಸ್ಥಿತಿಗೆ ಬಂದಿದೆ. ಜನರು ಬದುಕುವುದು ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನರು ಅಗತ್ಯ ವಸ್ತುಗಳ ಬೆಲೆ ಗುರಿಯಾಗಿರಿಸಿ ಕೊಳ್ಳೆ ಹೊಡೆಯುವುದಲ್ಲದೆ, ಸರ್ಕಾರ ಸಹ ಭ್ರಷ್ಟಚಾರದಲ್ಲಿ ತೊಡಗಿದೆ. ಪ್ರತಿ ನಿಗಮದಲ್ಲಿ ಭ್ರಷ್ಟತೆಯ ವಾಸನೆ ಕಂಡುಬರುತ್ತಿದೆ. ಇತ್ತೀಚೆಗೆ ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹರಾವೇ ಇದಕ್ಕೆ ಸಾಕ್ಷಿ. ಅವ್ಯವಹಾರ ಹಾಗೂ ಭ್ರಷ್ಟಾಚಾರ ತಿಳಿದಿದ್ದರೂ ಮುಖ್ಯಮಂತ್ರಿ ಹಾಗೂ ಸಚಿವರು ಕಣ್ಮುಚ್ಚಿ ಕುಳಿರುವುದು ಸರ್ಕಾರದ ನಡೆಗೆ ನಿದರ್ಶನ ಎಂದು ಹರಿಹಾಯ್ದರು.
ತಕ್ಷಣ ಮುಖ್ಯಮಂತ್ರಿಗಳು ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರವನ್ನು ತಡಹಿಡಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಬಿಜೆಪಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಫಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ತಿಮ್ಮರಡ್ಡಿ ಮರಡ್ಡಿ, ಬಸವರಾಜ ಪಲ್ಲೇದ, ಮೋಹನ ಗುತ್ತೆಮ್ಮನವರ, ಗೂಳಪ್ಪ ಕರಿಗಾರ ಮಾತನಾಡಿದರು. ಯಲ್ಲಪ್ಪ ಇಂಗಳಗಿ, ಸುದೀರ ಜಮಖಂಡಿ, ಅಕ್ಬರ ಯಾದಗಿರಿ, ಬಸವರಾಜ ವಡವಿ, ರಾಜು ಕಪ್ಪತ್ತನವರ, ಪರಶುರಾಮ ಡೊಂಕಬಳ್ಳಿ, ಪ್ರವೀಣಗೌಡ ಪಾಟೀಲ, ಅನಿಲ್ ಪಾಶ್ಚಾಪೂರ, ನಿಂಗಪ್ಪ ಬನ್ನಿ, ರಾಜೀವರೆಡ್ಡಿ ಬೊಮ್ಮನಕಟ್ಟಿ, ಕೊಟ್ರೇಶ ಸಜ್ಜನರ, ನಸವರಾಜ ಪೂಜಾರ, ಮಹಾದೇವ ಗಾಣಿಗೇರ ಇದ್ದರು.