ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪಟ್ಟಣದ ಬಿಜೆಪಿ ಕಾರ್ಯಾಲಯದಿಂದ ಹೊರಟ ಪ್ರತಿಭಟನಾಕಾರರು ನಾನಾ ಪ್ರಮುಖ ರಸ್ತೆಗಳ ಮೂಲಕ ಕಾಂಗ್ರೆಸ್ ವಿರುದ್ಧ ನಾನಾ ಘೋಷಣೆ ಕೂಗುತ್ತಾ ಸಚಿವ ಜಮೀರ್ ಅಹ್ಮದ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಜನತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಜ್ಜ, ಮುತ್ತಜ್ಜರ ಕಾಲದಿಂದ ಬಂದ ಭೂಮಿಗಳಲ್ಲಿ ರೈತರು ಕೃಷಿ ಚಟುವಟಿಕೆ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಮುಸ್ಲಿಂರ ಓಲೈಕೆಗಾಗಿ ಕಾಂಗ್ರೆಸ್‌ನವರು ರೈತರ ಜಮೀನು, ಮಠ ಮಾನ್ಯಗಳ ಆಸ್ತಿ, ಹಿಂದೂ ದೇವಸ್ಥಾನಗಳು, ಸಾರ್ವಜನಿಕರ ಆಸ್ತಿ, ಪಾಸ್ತಿ ಸೇರಿದಂತೆ ನಾನಾ ಇಲಾಖೆಗಳ ಕಚೇರಿಗಳ ಜಾಗಗಳನ್ನು ಅಕ್ರಮವಾಗಿ ವಕ್ಫ್ ಹೆಸರಿನಲ್ಲಿ ಸೇರಿಸಿಕೊಂಡು ಬಡವರ ಭೂಮಿ ಕಬಳಿಸುವ ಹುನ್ನಾರ ನಡೆಸಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದರು.ಬಿಜೆಪಿ ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಬಸವಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ, ಶಿವಶಂಕರ ದೇಸಾಯಿ ಮಾತನಾಡಿ, ಯಲಬುರ್ಗಾದಲ್ಲಿ ೨೪೦ ಹಾಗೂ ಕುಕನೂರು ತಾಲೂಕಿನಲ್ಲಿ ೮೦೦ ಎಕರೆ ಜಮೀನಿನಲ್ಲಿ ವಕ್ಫ್ ಹೆಸರಿನಲ್ಲಿ ಸೇರಿಕೊಂಡಿರುವುದು ರೈತರಿಗೆ ಆತಂಕ ತಂದಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.ಬಳಿಕ ತಹಸೀಲ್ದಾರ ಬಸವರಾಜ ತೆನ್ನಳ್ಳಿ ಅವರಿಗೆ ಮನವಿ ಸಲ್ಲಿಸಿದರು.