ಕೇಂದ್ರದಿಂದ ಅನ್ಯಾಯ ಖಂಡಿಸಿ ಧರಣಿ: ಡಿಕೆಶಿ

KannadaprabhaNewsNetwork | Published : Feb 4, 2024 1:32 AM

ಸಾರಾಂಶ

ಕೇಂದ್ರದಿಂದ ಒಂದು ರೂಪಾಯಿ ಕೂಡ ಬರಲಿಲ್ಲ. ನಾವು ಕಾಯುತ್ತಿದ್ದೇವೆ. ಈಗ ವಿಧಿ ಇಲ್ಲ. ಹೀಗಾಗಿ ಧರಣಿಗೆ ನಿರ್ಧರಿಸಿದ್ದೇವೆ. ರಾಜ್ಯದ ಹಿತಕ್ಕಾಗಿ ಧ್ವನಿ ಎತ್ತುವುದು ಬೇಡವೇ ಎಂದು ಡಿ.ಕೆ. ಶಿವಕುಮಾರ ಪ್ರಶ್ನಿಸಿದರು

ಹುಬ್ಬಳ್ಳಿ: ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಲೇ ಇದೆ. ಬರಗಾಲ ಬಂದಾಗ ಅನುದಾನ ಬಂದಿಲ್ಲ. ಒಬ್ಬರೇ ಒಬ್ಬ ಸಂಸದರು ಧ್ವನಿ ಎತ್ತಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.

ವಿಜಯಪುರದಿಂದ ರಸ್ತೆ ಮಾರ್ಗವಾಗಿ ನಗರಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಕೇಂದ್ರದಿಂದ ಬರಬೇಕಾದ ಯಾವ ಅನುದಾನವೂ ಬರುತ್ತಿಲ್ಲ. ನೀರಾವರಿಗೆ ₹5200 ಕೋಟಿ ಅನುದಾನ ಕೊಡುವುದಾಗಿ ಘೋಷಣೆ ಮಾಡಿದ್ದರು. ಒಂದು ರೂಪಾಯಿ ಕೂಡ ಬರಲಿಲ್ಲ. ನಾವು ಕಾಯುತ್ತಿದ್ದೇವೆ. ಈಗ ವಿಧಿ ಇಲ್ಲ. ಹೀಗಾಗಿ ಧರಣಿಗೆ ನಿರ್ಧರಿಸಿದ್ದೇವೆ. ರಾಜ್ಯದ ಹಿತಕ್ಕಾಗಿ ಧ್ವನಿ ಎತ್ತುವುದು ಬೇಡವೇ ಎಂದು ಪ್ರಶ್ನಿಸಿದರು.

ನಾನು, ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲೇ ಮಾತನಾಡಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನಸ್ಸು ಮಾಡಿದರೆ ಏನೆಲ್ಲ ಕೊಡಿಸಬಹುದು. ನಮ್ಮ ಸರ್ಕಾರ ಬಿಡಿ, ಹಿಂದಿನ ಬೊಮ್ಮಾಯಿ ಸರ್ಕಾರಕ್ಕೆ ಏನ ಮಾಡಿದರಿ ಹೇಳಿ ಎಂದು ಕೇಳಿದರು.

ಬರಗಾಲದ ಹಣ ನಾವು ಕೊಟ್ಟಿದ್ದೇವೆ. ಬೋರವೆಲ್‌ ಕೊರೆಸುವುದಕ್ಕೆ ಡಿಸಿ ಅವರಿಗೆ ಹೇಳಿದ್ದೇವೆ. ನೀರಿನ ಸಮಸ್ಯೆ ಆಗದಂತೆ ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.ಟ್ರಾಫಿಕ್‌ ಜಾಮ್‌: ಡಿಕೆಶಿ ಗರಂ

ತಾವು ಬರುವುದಕ್ಕೆ 1 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌ ಮಾಡಿದ್ದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಫುಲ್‌ ಗರಂ ಆಗಿದ್ದರು. ಕಾಂಗ್ರೆಸ್‌ ಕಾರ್ಯಕರ್ತರನ್ನು ತರಾಟೆ ತೆಗೆದುಕೊಂಡರು. ವಿಜಯಪುರದಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದರು. ಇವರನ್ನು ಸ್ವಾಗತಿಸಲೆಂದು ಹೊರವಲಯದಲ್ಲಿ ಕಾರ್ಯಕರ್ತರು ಕಾಯುತ್ತಿದ್ದರು. ಬೃಹತ್‌ ಹೂವಿನ ಮಾಲೆ ಹಾಕಿ ಡಿಕೆಶಿ ಅವರನ್ನು ಸ್ವಾಗತಿಸಿದರು. ಬಳಿಕ ಪಟಾಕಿ ಸಿಡಿಸಿದರು.

ಇದರಿಂದಾಗಿ ಟ್ರಾಫಿಕ್‌ ಜಾಮ್‌ ಆಗಿತ್ತು. ಸುಮಾರು 1ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌ ಆಗಿತ್ತು. ಆಗ ಪಟಾಕಿ ಸಿಡಿಸಿದ ಕಾರ್ಯಕರ್ತರನ್ನು ಕರೆದು ತರಾಟೆಗೆ ತೆಗೆದುಕೊಂಡ ಡಿಕೆಶಿ, ನಾನೇ ಬರಲಿ, ಮುಖ್ಯಮಂತ್ರಿಗಳೇ ಬರಲಿ. ರಸ್ತೆಯಲ್ಲಿ ಪಟಾಕಿ ಹಾರಿಸುವುದು ಎಷ್ಟು ಸರಿ? ನಮ್ಮಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡು, ಮುಂದೆ ಈ ರೀತಿಯೆಲ್ಲ ಮಾಡಬೇಡಿ ಎಂದು ತಿಳಿ ಹೇಳಿದರು. ಇದೇ ವೇಳೆ ತಮಗಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದಕ್ಕೆ ಗ್ರಾಮೀಣ ಠಾಣೆಯ ಪೊಲೀಸ್‌ ಸಿಬ್ಬಂದಿ ಮೇಲೂ ಗರಂ ಆದರು.

Share this article