
ಕನ್ನಡಪ್ರಭ ವಾರ್ತೆ ಮಡಿಕೇರಿ
ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ವಕೀಲ ಜುನೈದ್ ಅವರು ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ ಚಾಲನೆ ನೀಡಿದರು. ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ನಗರ ಪೊಲೀಸ್ ಠಾಣೆ, ಮಂಗೇರಿರ ಮುತ್ತಣ್ಣ ಮೂಲಕ ಜನರಲ್ ತಿಮ್ಮಯ್ಯ ವೃತ್ತದತ್ತ ಮೆರವಣಿಗೆ ಸಾಗಲು ಮುಂದಾದಾಗ ಪ್ರತಿಭಟನಾ ನಿರತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಜನರಲ್ ತಿಮ್ಮಯ್ಯ ವೃತ್ತದತ್ತ ಮೆರವಣಿಗೆ ಸಾಗಿದ ಪ್ರತಿಭಟನಾ ನಿರತರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಯಾವುದೇ ಒಬ್ಬ ಮತದಾರನ ಹಕ್ಕನ್ನು ಮತದಾರನ ಪಟ್ಟಿಯಿಂದ ಡಿಲೀಟ್ ಮಾಡಬೇಕಾದರೆ ನೋಟಿಸ್ ನೀಡಬೇಕು. ಅಥವಾ ಪರಿಶೀಲನೆ ಮಾಡಬೇಕು. ಆದರೆ, ಇವೆರೆಡು ನಡೆಯದ ಪರಿಣಾಮ ದೇಶದಲ್ಲಿ 13 ಕೋಟಿ ಜನರ ಮತದಾನವನ್ನು ಕಳೆದುಕೊಂಡಿದ್ದಾರೆ ಎಂದ ಅವರು,ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಜನರನ್ನು ಎಸ್ಐಆರ್ನಿಂದ ಕೈಬಿಡಲಾಗಿದೆ. ಇದರಲ್ಲಿ 23 ಲಕ್ಷ ಮತದಾರರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಇದುವರೆಗೆ 1 ಲಕ್ಷ ಕಡತ ವಿಲೇವಾರಿ ಮಾಡಿದ ಸಂದರ್ಭ 93,000 ಜನರಿಗೆ ಮತದಾನ ಹಕ್ಕು ಲಭ್ಯವಾಗಿದೆ. ಇದೇ ರೀತಿ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಮಾತ್ರ ಎಸ್ಐಆರ್ ಜಾರಿಗೆ ತರಲಾಗಿದೆ ಎಂದರು.
ಮೋಸದ ದಾರಿಯಾಗಿದೆ:
ಇಂದು ಗೂಂಡಾಗಿರಿ ತನಕ್ಕೆ ಪೊಲೀಸ್ ಇಲಾಖೆಯನ್ನು ಒಳಸಿಕೊಳ್ಳಲಾಗುತ್ತಿದೆ. ಇಂತಹ ಹೀನಾಯ ಸ್ಥಿತಿ ನಮ್ಮ ದೇಶದಲ್ಲಿದೆ ಎಂದು ಅವರು, ಕೊಡಗು ಜಿಲ್ಲೆಯಲ್ಲಿಯೂ ಓಟ್ ಚೋರಿಯಾಗಿದೆ ಎಂದರು.
ವೇದಿಕೆಯ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ಜನರು ಇಂದು ಎಕತೆಯೊಂದಿಗೆ ಬೀದಿಗೆ ಇಳಿದಿದ್ದಾರೆ. ಆದರೆ, ಭಾರತದ ಧ್ವಜ ಹಿಡಿದು ಹೋರಾಟ ಮಾಡುವವರನ್ನು ಬಂಧನದಲ್ಲಿಡುವ ಕೆಲಸವಾಗುತ್ತಿದೆ. ಇದು ಖಂಡನೀಯ. ಜತೆಗೆ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಕುತಂತ್ರದಿಂದ ಸುದೀರ್ಘವಾದ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಅಕ್ರಮವಾಗಿ ಫಾರಂ 7 ನೀಡಿದ ಬಿಎಲ್ಎಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಜಿಲ್ಲಾಡಳಿತ ಈ ಸಂಬಂಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸಬೇಕು. ಜತೆಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮತದಾರರು ಪಾಠವನ್ನು ಕಲಿಸಬೇಕು ಎಂದರು.
ಇದೇ ಸಂದಂರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವೇದಿಕೆಯ ಗೌರವಾಧ್ಯಕ್ಷ ಮೊಹಮ್ಮದ್ ಹನೀಫ್, ಸದಸ್ಯರಾದ ಪ್ರೇಮ್ ಕುಮಾರ್, ಎಸ್ಡಿಪಿಐ ಮಾಜಿ ಅಧ್ಯಕ್ಷ ಅಬ್ದುಲ್ ಅಡ್ಕರ್, ಪ್ರಮುಖರಾದ ಕೆ.ಕೆ.ಮೊಣ್ಣಪ್ಪ, ಮನ್ಸೂರು ಆಲಿ, ಕೊಟ್ಟಮುಡಿ ಹಂಸ, ಜಾನ್ಸನ್ ಪಿಂಟೋ, ಬೋಜಣ್ಣ ಸೋಮಯ್ಯ ಹಾಗೂ ಆದಿವಾಸಿ ನಿವಾಸಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.