ಕನ್ನಡಪ್ರಭ ವಾರ್ತೆ ಸವದತ್ತಿ
ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಬಿಸಾಕುವತನಕ ನಮಗೆ ವಿಶ್ರಾಂತಿ ಇಲ್ಲದಾಗಿದ್ದು, ಸಾಧು ಸಂತರಗಳ ಮೇಲೆ ನಡೆಯುತ್ತಿರುವ ಅನ್ಯಾಯಕ್ಕೆ ಎಲ್ಲ ಕಾಂಗ್ರೆಸ್‌ನ ಶಾಸಕರ ಮನೆಗಳಿಗೆ ನುಗ್ಗುವಂತ ಸಂದರ್ಭಗಳು ಎದುರಾಗಲಿವೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.ಕನೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ವಿವಿಧ ಜಿಲ್ಲೆಗಳಿಗೆ ಪ್ರವೇಶ ನಿಷೇಧಿಸಿರುವುದನ್ನು ಖಂಡಿಸಿ ಗುರುವಾರ ಬಸವಾದಿ ಶರಣರ ಹಿಂದೂ ವೇದಿಕೆಯವರಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ನಿರ್ಬಂಧನ ಹಾಕುತ್ತಿದ್ದು, ಇದಕ್ಕೆ ತಕ್ಕಪಾಠವನ್ನು ಕಾಂಗ್ರೆಸ್ ಸರ್ಕಾರಕ್ಕೆ ಕಲಿಸಬೇಕಿದೆ ಎಂದರು.
ಕನೇರಿಮಠದ ಶ್ರೀಗಳಿಗೆ ನಿರ್ಬಂಧವಿಧಿಸಿದರುವುದು ಸಾಧು ಸಂತರಿಗೆ ಮಾಡಿದ ಅವಮಾನವಾಗಿದೆ. ಸಾಧು ಸಂತರ ಮತ್ತು ರೈತ ವಿರೋಧಿ ಸರ್ಕಾರದ ವಿರುದ್ಧ ಇಂದು ರೈತರು ಬೀದಿಗೆ ಬಂದು ಹೋರಾಟ ಮಾಡುತ್ತಿದ್ದು, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುವಲ್ಲಿ ಸರ್ಕಾರ ಅಸಹಾಯಕವಾಗಿ ಕೈಕಟ್ಟಿ ಕುಳಿತುಕೊಂಡಿದೆ. ಗೋ ಭಕ್ಷಕರಿಗಿಂತ ಗೋ ರಕ್ಷರಿಗೆ ಇಂದು ಕಾಂಗ್ರೆಸ್ ಸರ್ಕಾರ ನಿರ್ಬಂಧನ ಹೇರುತ್ತಿರುವುದು ವಿಷಾದನೀಯ ಎಂದರು. ಅದೃಷ್ಯ ಕಾಡಸಿದ್ದೇಶ್ವರ ಶ್ರೀಗಳು ನೈಸರ್ಗಿಕ ಕೃಷಿ ಚಟುವಟಿಕೆಗಳ ಮೂಲಕ ಜನೋಪಯೋಗಿ ಸೇವಾ ಚಟುವಟಿಕೆಗಳ ಮೂಲಕ ಗುರುಕುಲ ಪದ್ಧತಿಯನ್ನು ಅನುಸರಿಸುತ್ತಿದ್ದು, ಅಂತವರಿಗೆ ರಾಜ್ಯ ಸರ್ಕಾರ ನಿರ್ಬಂಧ ಹಾಕುತ್ತಿರುವುದು ಯಾವ ನ್ಯಾಯ ಎಂದರು.ಅಧ್ಯಾತ್ಮದ ದೇಶ ನಮ್ಮದಾಗಿದ್ದು, ಕಾಂಗ್ರೆಸ್ಸಿಗರೇ ನಮ್ಮ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ತಮಗೆ ನಂಬಿಕೆ ಇಲ್ಲದಿದ್ದರೇ ಬಾಯಿ ಮುಚ್ಚಿಕೊಂಡು ಸುಮ್ಮನ್ನಿರಿ. ಅದನ್ನು ಬಿಟ್ಟು ದೇಶ, ಜಾತಿ, ಭಾಷೆಗಳನ್ನು ಒಡೆಯುವ ಕಾರ್ಯವನ್ನು ಮಾಡದಿರಿ. ಕಾಂಗ್ರೆಸ್ ಸರ್ಕಾರವು ಅನ್ಯ ಮಾರ್ಗಗಳ ಮೂಲಕ ಇಂದು ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದರು.
ಶಿಂಧೋಗಿಯ ಮುಕ್ತಾನಂದ ಮಹಾಸ್ವಾಮೀಜಿ ಮಾತನಾಡಿ, ನಮ್ಮ ದೇವಾನು ದೇವತೆಗಳ ಬಗ್ಗೆ ಅಪಮಾನ ಮಾಡಿದವರಿಗೆ ಏನೂ ಮಾಡದೆ ಇರುವಂತವರು ಇಂದು ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬಂದಿರುವ ಹಾಗೂ ಧರ್ಮದ ಕಾರ್ಯ ಮಾಡುವವರ ಮೇಲೆ ನಿರ್ಬಂಧಗಳನ್ನು ಹೇರುತ್ತಿರುವುದು ಖಂಡನೀಯ. ಸನಾತನ ಸಂಸ್ಕೃತಿಯಲ್ಲಿ ಸಾಧು ಸಂತರಿಗೆ ಸಮಾಜದ ಸಂಕೇತ ಎಂದು ಶಾಸ್ತ್ರ ಹೇಳುತ್ತಿದ್ದು, ಪ್ರಾಮಾಣಿಕ ಸಾಧುಗಳನ್ನು ಎದುರು ಹಾಕಿಕೊಂಡರೆ ಕ್ಷಣಾರ್ಧದಲ್ಲಿ ತಾವು ನಾಶವಾಗಲಿದ್ದೀರಿ ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷಣ್ಣ ಮಾಮನಿ ಹಾಗೂ ಮಡಿವಾಳಪ್ಪ ಬಿದರಗಡ್ಡಿ ಮಾತನಾಡಿ, ಕಾಂಗ್ರೆಸ್ ಸರಕಾರ ತಮ್ಮ ವೈಫಲ್ಯತೆಗಳನ್ನು ಮರೆಮಾಚುವದರ ಜೊತೆಗೆ ಅಧಿಕಾರದ ಆಸೆಗಾಗಿ ಹಿಂದೂ ಧರ್ಮ ಮತ್ತು ಲಿಂಗಾಯತ ಧರ್ಮವನ್ನು ಒಡೆಯುವ ಕಾರ್ಯವನ್ನು ಮಾಡುತ್ತಿರುವುದು ಅಸಹನೀಯ ಎಂದರು. ಕನ್ನೇರಿ ಶ್ರೀಗಳಿಗೆ ವಿವಿಧ ಜಿಲ್ಲೆಗಳಲ್ಲಿ ಪ್ರವೇಶ ನಿಷೇಧಿಸಿರುವದನ್ನು ಖಂಡಿಸುವುದರ ಜೊತೆಗೆ ಕೂಡಲೇ ಈ ನಿರ್ಬಂಧವನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕು ಸಂಚಾಲಕ ಜಯಶಂಕರ ವಣ್ಣೂರ ನೇತೃತ್ವದಲ್ಲಿ ಕಲ್ಮಠದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧ ತಲುಪಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರವರಿಗೆ ಮನವಿ ಸಲ್ಲಿಸಲಾಯಿತು.ಚಿಕ್ಕುಂಬಿಯ ನಾಗಲಿಂಗ ಮಹಾಸ್ವಾಮೀಜಿ, ಉಗರಗೋಳದ ಮಹಾಂತ ಸ್ವಾಮೀಜಿ, ಗದ್ದಿಕೇರಿಯ ಸಚ್ಚಿದಾನಂದ ಸ್ವಾಮೀಜಿ, ಹಣಮನಳ್ಳಿಯ ಶಿವಬಸವ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಈರಣ್ಣ ಚಂದರಗಿ, ಗೌತಮ ದ್ಯಾಮನಗೌಡರ, ಭರಮಪ್ಪ ಅಣ್ಣಿಗೇರಿ, ಈಶ್ವರ ಮೇಲಗೇರಿ, ಜಗದೀಶ ಕೌಜಗೇರಿ, ಕಲ್ಮೇಶ ನೀಲಿಶೆಟ್ಟಿ, ಪಲ್ಲವಿ ಪದಕಿ, ಕುಮಾರಸ್ವಾಮಿ ತಲ್ಲೂರಮಠ, ಪಾರ್ವತಿ ಕಾಂತಿಮಠ, ಸೋಮಯ್ಯ ಪಾಟೀಲ, ರವಿ ಕಾಸರ, ಉಮೇಶ ಕೋರಿಕೊಪ್ಪ, ಅಜ್ಜಪ್ಪ ಪೂಜೇರ, ಮಲ್ಲಿಕಾರ್ಜುನ ಬೀಳಗಿ ಇದ್ದರು.