ಚೀಟಿ ಹಣ ಕೊಡದ ಕೊಡಚಾದ್ರಿ ಚಿಟ್‌ ಫಂಡ್‌ ವಿರುದ್ಧ ಪ್ರತಿಭಟನೆ

KannadaprabhaNewsNetwork | Published : Mar 11, 2025 12:49 AM

ಸಾರಾಂಶ

ಕೊಡಚಾದ್ರಿ ಫೈನಾನ್ಸ್‌ನವರು ಪಿಗ್ನಿ ರೂಪದಲ್ಲಿ ಸಂಗ್ರಹಿಸಿರುವ ಹಣವನ್ನು ಬಡ್ಡಿ ಸಮೇತ ವಾಪಸ್‌ ಕೊಡದಿದ್ದರೆ ಬ್ಯಾಂಕಿಗೆ ಬೀಗ ಹಾಕುವುದಾಗಿ ಸಿಐಟಿಯು ಮುಖಂಡ ಮಂಜುನಾಥ್ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಸಿ. ಜಿ. ರವಿ ತಿಳಿಸಿದರು. ಜನರ ಹಣ ಪಡೆದ ಬ್ಯಾಂಕ್‌ಗಳು ಜನರು ಕೇಳಿದಾಗ ವಾಪಸ್ ಹಣ ನೀಡದೆ ಮೇಲಧಿಕಾರಿಗಳ ಅನುಮತಿ ಬಂದಿಲ್ಲ, ನೀವು ಸರಿಯಾದ ಸಮಯಕ್ಕೆ ಹಣ ಕಟ್ಟಿಲ್ಲ ಹೀಗೆ ಅನೇಕ ಕಾರಣಗಳನ್ನು ನೀಡಿ ಬಡ ಜನರು ಸಾಲ ಸೋಲ ಮಾಡಿ ಒಂದೊಂದು ರುಪಾಯಿಗಳನ್ನು ಕೂಡಿಸಿ ಬ್ಯಾಂಕಿಗೆ ಬಂದು ಹಣ ಕಟ್ಟಿದ್ದನ್ನು ವಾಪಸ್ ನೀಡದೆ ಜನರಿಗೆ ತೊಂದರೆ ನೀಡುವ ಇಂತಹ ಬೇಜವಾವ್ದಾರಿ ಅಕ್ರಮ ಬ್ಯಾಂಕ್‌ಗಳಿಗೆ ಬೀಗ ಹಾಕಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕೊಡಚಾದ್ರಿ ಫೈನಾನ್ಸ್‌ನವರು ಪಿಗ್ನಿ ರೂಪದಲ್ಲಿ ಸಂಗ್ರಹಿಸಿರುವ ಹಣವನ್ನು ಬಡ್ಡಿ ಸಮೇತ ವಾಪಸ್‌ ಕೊಡದಿದ್ದರೆ ಬ್ಯಾಂಕಿಗೆ ಬೀಗ ಹಾಕುವುದಾಗಿ ಸಿಐಟಿಯು ಮುಖಂಡ ಮಂಜುನಾಥ್ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಸಿ. ಜಿ. ರವಿ ತಿಳಿಸಿದರು.

ಅವರು ಪಟ್ಟಣದ ಬಿ. ಎಂ. ರಸ್ತೆಯ ಎಸ್‌ಬಿಐ ಬ್ಯಾಂಕ್ ಪಕ್ಕದಲ್ಲಿರುವ ಕೊಡಚಾದ್ರಿ ಫೈನಾನ್ಸ್ ಎದುರು ವಿವಿಧ ಸಂಘಟನೆಗಳ ಪ್ರತಿಭಟನೆಯಲ್ಲಿ ಮಾತನಾಡಿ, ಇಬ್ಬರು ಗ್ರಾಹಕರು ಚೀಟಿ ಕೂಗಿದಾಗ ಚೀಟಿಯ ಹಣವನ್ನು ಕೊಟ್ಟಿಲ್ಲ. ಮಾತ್ರವಲ್ಲ ಅವರು ಕಟ್ಟಿರುವ ಹಣವನ್ನು ವಾಪಸ್‌ ಕೊಡದೆ ಬ್ಯಾಂಕಿನ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ತೋರುತ್ತಿದ್ದು ಇಂತಹ ಗ್ರಾಹಕರ ವಿರೋಧಿ ಬ್ಯಾಂಕ್ ಅವನ್ನು ಕೂಡಲೆ ಮುಚ್ಚಿಸಿ ಅಧಿಕಾರಿಗಳು ಕ್ರಮ ವಹಿಸಬೇಕು. ಜನರ ಹಣ ಪಡೆದ ಬ್ಯಾಂಕ್‌ಗಳು ಜನರು ಕೇಳಿದಾಗ ವಾಪಸ್ ಹಣ ನೀಡದೆ ಮೇಲಧಿಕಾರಿಗಳ ಅನುಮತಿ ಬಂದಿಲ್ಲ, ನೀವು ಸರಿಯಾದ ಸಮಯಕ್ಕೆ ಹಣ ಕಟ್ಟಿಲ್ಲ ಹೀಗೆ ಅನೇಕ ಕಾರಣಗಳನ್ನು ನೀಡಿ ಬಡ ಜನರು ಸಾಲ ಸೋಲ ಮಾಡಿ ಒಂದೊಂದು ರುಪಾಯಿಗಳನ್ನು ಕೂಡಿಸಿ ಬ್ಯಾಂಕಿಗೆ ಬಂದು ಹಣ ಕಟ್ಟಿದ್ದನ್ನು ವಾಪಸ್ ನೀಡದೆ ಜನರಿಗೆ ತೊಂದರೆ ನೀಡುವ ಇಂತಹ ಬೇಜವಾವ್ದಾರಿ ಅಕ್ರಮ ಬ್ಯಾಂಕ್‌ಗಳಿಗೆ ಬೀಗ ಹಾಕಬೇಕು ಎಂದು ಆಗ್ರಹಿಸಿದರು.

ಚೀಟಿ ಕೂಗಿದವರಿಂದ ಖಾಲಿ ಚೆಕ್ ಪಡೆಯಲಾಗಿದೆ ಅವುಗಳನ್ನು ಕೂಡಲೇ ವಾಪಸ್‌ ಕೊಡಬೇಕು, ಕೊಡಚಾದ್ರಿ ಫೈನಾನ್ಸ್‌ನವರ ಮೋಸ ಹಾಗೂ ವಂಚನೆ ತಡೆಗಟ್ಟಿ ಇತರೆ ಮೈಕ್ರೋ ಫೈನಾನ್ಸ್‌ನವರ ಕಿರುಕುಳಗಳನ್ನು ನಿಲ್ಲಿಸಬೇಕು. ಕೊಡಚಾದ್ರಿ ಫೈನಾನ್ಸ್‌ನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದರು.

ಪ್ರತಿಭಟನೆಯಲ್ಲಿ ಮುಖಂಡರುಗಳಾದ ಮೀಸೆ ಮಂಜಣ್ಣ, ಶಂಕರ್‌ ಬರಗೂರು, ಜಗದೀಶ್‌ ಕೆರೆಬೀದಿ, ತೇಜಸ್, ಸುನಿಲ್, ಮಂಜೇಗೌಡ ಜೋಗಿಪುರ, ಮಹೇಶ್‌ ಗುಳಸಿಂದ, ಶಾಂತರಾಜ್, ಮಹೇಶ್, ರಂಗಸ್ವಾಮಿ ಮತ್ತಿತರಿದ್ದರು.

Share this article