ಆರೋಗ್ಯಕರ ಸಮಾಜಕ್ಕಾಗಿ ಮಾದಕ ವಸ್ತುಗಳಿಂದ ದೂರವಿರಿ: ಲೋಕೇಶ್ ಕುಮಾರ್

KannadaprabhaNewsNetwork |  
Published : Mar 11, 2025, 12:49 AM IST
ಬಳ್ಳಾರಿಯಲ್ಲಿ ಭಾನುವಾರ ಜರುಗಿದ 5ಕೆ ಪೊಲೀಸ್ ರನ್ ನಲ್ಲಿ ಮಹಿಳಾ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದ ಧಾರವಾಡದ ವಿಜಯಲಕ್ಷ್ಮಿ ಅವರಿಗೆ ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್ ಅವರು ಟ್ರೋಫಿ ವಿತರಿಸಿದರು. ಎಸ್ಪಿ ಡಾ.ಶೋಭಾರಾಣಿ ಇದ್ದರು.  | Kannada Prabha

ಸಾರಾಂಶ

ಸ್ವಸ್ಥ, ಸದೃಢ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಯುವ ಸಮುದಾಯವು ಮಾದಕ ವಸ್ತುಗಳಿಂದ ದೂರವಿರಬೇಕು.

ಕರ್ನಾಟಕ ರಾಜ್ಯ ಪೊಲೀಸ್ ರನ್-2025 ಗೆ ಚಾಲನೆ-ಬಹುಮಾನ ವಿತರಣೆಕನ್ನಡಪ್ರಭ ವಾರ್ತೆ ಬಳ್ಳಾರಿ

ಸ್ವಸ್ಥ, ಸದೃಢ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಯುವ ಸಮುದಾಯವು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್. ಲೋಕೇಶ್ ಕುಮಾರ್ ಕರೆ ನೀಡಿದರು.

ಕರ್ನಾಟಕ ರಾಜ್ಯ ಪೊಲೀಸ್ ರನ್-2025 ಕಾರ್ಯಕ್ರಮ ಅಂಗವಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ನಮ್ಮೆಲ್ಲರ ಸದೃಢತೆ ಮತ್ತು ಡಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಎಂಬ ಧ್ಯೇಯವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರದ ಕನಕ ದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 5ಕೆ ಪೊಲೀಸ್ ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರು ರಸ್ತೆ ಸುರಕ್ಷತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಾಲನೆಯಲ್ಲಿ ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ತಪ್ಪದೇ ಧರಿಸಬೇಕು. ಸೈಬರ್ ವಂಚಕರಿಂದ ಸುರಕ್ಷತೆಯ ಅರಿವು ಹೊಂದಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಪ್ರತಿಯೊಬ್ಬರು ಸದೃಢ ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ನಿಯಮಿತವಾಗಿ ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ., ನಮ್ಮೆಲರ ಸದೃಢತೆ ಹಾಗೂ ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 5ಕೆ ಪೊಲೀಸ್ ರನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಎಚ್. ಸೂರ್ಯವಂಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ಪಿ. ರವಿಕುಮಾ‌ರ್, ನವೀನ್ ಕುಮಾರ್, ಎಸ್.ಬಿ.ಐ ಬಳ್ಳಾರಿ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕ ಇರ್ಷಾದ್ ಆಲಂ ಸೇರಿದಂತೆ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು, ನಿವೃತ್ತ ಯೋಧರು, ಅಥ್ಲೆಟ್ಸ್, ವಿವಿಧ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಾರ್ವಜನಿಕರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದರು.

ಮ್ಯಾರಥಾನ್ ಓಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ಮತ್ತು ಟ್ರೋಫಿ ವಿತರಣೆ ಮಾಡಲಾಯಿತು.

ಮಹಿಳೆಯರ ವಿಭಾಗದಲ್ಲಿ ಬಳ್ಳಾರಿಯ ಸಿರೀಷಾ ಪ್ರಥಮ, ಧಾರವಾಡದ ವಿಜಯಲಕ್ಷ್ಮಿ ದ್ವಿತೀಯ, ಬಳ್ಳಾರಿಯ ಜಾಹೀದಾ ತೃತೀಯ ಬಹುಮಾನ ಪಡೆದರೆ, ಪುರುಷರ ವಿಭಾಗದಲ್ಲಿ ಬೆಳಗಾವಿಯ ಶಿವಾನಂದ ಪ್ರಥಮ, ಬೆಂಗಳೂರಿನ ರಾಜೇಶ್ ಕುಮಾರ್ ದ್ವಿತೀಯ, ಧಾರವಾಡದ ಮಣಿಕಂಠ ತೃತೀಯ ಬಹುಮಾನ ಪಡೆದರು.

ಬಳ್ಳಾರಿ ಪೊಲೀಸ್ 5ಕೆ ರನ್ ದುರುಗಮ್ಮ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು ಗಡಗಿ ಚೆನ್ನಪ್ಪ ವೃತ್ತ, ಹಳೇ ಡಿಸಿ ಕಚೇರಿ ಮುಂಭಾಗದಿಂದ ಎಚ್.ಆರ್. ಗವಿಯಪ್ಪ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ವಾಲ್ಮೀಕಿ ವೃತ್ತ (ಎಸ್.ಪಿ ಸರ್ಕಲ್), ತಾಳೂರು ರಸ್ತೆ ಕ್ರಾಸ್ ಮೂಲಕ ಮರಳಿ ಕನಕ ದುರ್ಗಮ್ಮ ದೇವಸ್ಥಾನದ ಆವರಣಕ್ಕೆ ತಲುಪಿ ಅಂತ್ಯಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!