ಹಾವೇರಿಯಲ್ಲಿ ಕಾರಿನ ಗ್ಲಾಸ್‌ ಒಡೆದು ₹33 ಲಕ್ಷ ದೋಚಿದ್ದ ಆರೋಪಿ ಸೆರೆ

KannadaprabhaNewsNetwork |  
Published : Mar 11, 2025, 12:49 AM IST
10ಎಚ್‌ವಿಆರ್3 | Kannada Prabha

ಸಾರಾಂಶ

ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು, 4 ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

ಹಾವೇರಿ: ಇಲ್ಲಿಯ ಬಸವೇಶ್ವರ ನಗರದಲ್ಲಿ ಹಾಡಹಗಲಲ್ಲೇ ಕಾರಿನ ಗ್ಲಾಸ್ ಒಡೆದು ಅದರಲ್ಲಿಟ್ಟಿದ್ದ ₹33 ಲಕ್ಷ ನಗದು ದೋಚಿಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ಆತನಿಂದ ₹30 ಲಕ್ಷ ವಶಪಡಿಸಿಕೊಂಡಿದ್ದಾರೆ.

ನಗರದ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್‌ಪಿ ಅಂಶುಕುಮಾರ ಅವರು, ಮಾ. 6ರಂದು ಬಸವೇಶ್ವರನಗರ ಎ ಬ್ಲಾಕ್ 10ನೇ ಕ್ರಾಸ್‌ನಲ್ಲಿ ಸಿವಿಲ್ ಗುತ್ತಿಗೆದಾರ ಸಂತೋಷ ಹಿರೇಮಠ ಅವರು ಯುನಿಯನ್ ಬ್ಯಾಂಕ್‌ನಲ್ಲಿ ಹಣವನ್ನು ಡ್ರಾ ಮಾಡಿಕೊಂಡು ಬಂದಿದ್ದರು. ಬಸವೇಶ್ವರ ನಗರದಲ್ಲಿ ಮನೆ ಎದುರು ಕಾರು ನಿಲ್ಲಿಸಿ ಒಳಗಡೆ ಹೋಗಿದ್ದರು. ದೊಡ್ಡ ಮೊತ್ತದ ಹಣ ತೆಗೆಯಿಸಿಕೊಂಡು ಬಂದ ಗುತ್ತಿಗೆದಾರನ ಕಾರು ಬೆನ್ನತ್ತಿ ಬಂದ ಕಳ್ಳರು, ಕ್ಷಣಾರ್ಧದಲ್ಲಿ ಕಾರಿನ ಗ್ಲಾಸ್ ಒಡೆದು ಅದರಲ್ಲಿದ್ದ ₹33 ಲಕ್ಷ ದೋಚಿ ಬೈಕ್‌ನಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು, 4 ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿತರು ಬೈಕ್‌ನಲ್ಲೇ ಹಾವೇರಿಯಿಂದ ಬೆಂಗಳೂರು ಮಾರ್ಗವಾಗಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯನ್ನು ತಲುಪಿದ್ದರು. ಸಿಸಿ ಕ್ಯಾಮೆರಾ, ಪೆಟ್ರೋಲ್ ಬಂಕ್ ಹೀಗೆ ಹೆದ್ದಾರಿ ಕಡೆಗಳೆಲ್ಲ ಮಾಹಿತಿ ಪಡೆದುಕೊಂಡು, ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆಂಧ್ರಪ್ರದೇಶ ಚಿತ್ತೂರ ಜಿಲ್ಲೆಯ ಪೊಲೀಸರ ಸಹಾಯದೊಂದಿಗೆ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದೆವು. ಚಿತ್ತೂರು ಜಿಲ್ಲೆಯ ಒ.ಜಿ. ಕುಪ್ಪಂ ಎಂಬ ಹಳ್ಳಿಯಲ್ಲಿ ವಾಸವಿದ್ದ ಎ. ಜಗದೀಶ ಎ. ರಾಜು(28) ಎಂಬ ಆರೋಪಿಯನ್ನು ದಸ್ತಗಿರಿ ಮಾಡಿ, ಆತನ ಬಳಿ ಇದ್ದ ₹30 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿತರು ಇದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.

ತನಿಖಾ ತಂಡಕ್ಕೆ ಶ್ಲಾಘನೆ: ಮೊದಲನೇ ತನಿಖಾ ತಂಡದಲ್ಲಿ ಇನ್‌ಸ್ಪೆಕ್ಟರ್‌ ಮೋತಿಲಾಲ್ ಪವಾರ ನೇತೃತ್ವದಲ್ಲಿ ಮಹಾಂತೇಶ ಎಂ.ಎಂ., ಪಿ.ಡಿ ಆರೇರ, ನಿಂಗಪ್ಪ ಕರಕಣ್ಣನವರ, ಎಂ.ಜಿ. ಎರೇಶಿಮಿ, ಎಸ್.ಜಿ ವಡ್ನಿಕೊಪ್ಪ, ಮಾಲತೇಶ ಎರೇಶಿಮಿ, ಮುತ್ತಪ್ಪ ಲಮಾಣಿ, ಎಂ.ಕೆ ನದಾಫ, ಚನ್ನಬಸಪ್ಪ ಆರ್.ಬಿ., ನೀಲಕಂಠ ಲಿಂಗರಾಜು, ಮಲ್ಲೇಶ ಮಾಯಗೊಂಡರ, ಎಂ.ಎಸ್. ಮೆಣಸಕ್ಕನವರ, ಚಂದ್ರಕಾಂತ ಎಲ್.ಆರ್., ಬಸವರಾಜ ಸಿಳ್ಳಿಕ್ಯಾತರ ಇದ್ದರು.

ಎರಡನೇ ತಂಡದಲ್ಲಿ ಗ್ರಾಮೀಣ ಸಿಪಿಐ ಸಂತೋಷ ಪವಾರ ಹಾಗೂ ಸುರೇಶ ನಾಯಕ, ಮೂರನೇ ತಂಡದಲ್ಲಿ ಮಹಿಳಾ ಠಾಣೆಯ ಸಿದ್ಧಾರೂಢ ಬಡಿಗೇರ, ರವಿಕುಮಾರ, ಶರೀಫ, ನಾಲ್ಕನೇ ತಂಡದಲ್ಲಿ ಬ್ಯಾಡಗಿ ಸಿಪಿಐ ಮಹಾಂತೇಶ ಲಂಬಿ ನೇತೃತ್ವದಲ್ಲಿ ಗುಡ್ಡಪ್ಪ ಹಳ್ಳೂರಮಠ, ಲೋಕೇಶ ಲಮಾಣಿ, ಮಾರುತಿ ಹಾಲಭಾವಿ, ಸತೀಶ ಮಾರುಕಟ್ಟೆ, ಶಶಿಕುಮಾರ ಕಾಕೋಳ ಇದ್ದರು. ಈ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್‌ಪಿ ಶ್ಲಾಘನೆ ವ್ಯಕ್ತಪಡಿಸಿದರು. ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿ ಎಂ.ಎಸ್. ಪಾಟೀಲ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...