ಕನ್ನಡಪ್ರಭ ವಾರ್ತೆ ಮಂಡ್ಯ
ಅಸ್ಪಶ್ಯತೆ, ಜಾತೀಯತೆ, ಲಿಂಗ ತಾರತಮ್ಯ, ಅಸಮಾನತೆಯ ಮನುಸ್ಮತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸುಟ್ಟ ಐತಿಹಾಸಿಕ ದಿನದಂದು ವಿವಿಧ ಸಂಘಟನೆಯ ಕಾರ್ಯಕರ್ತರು ಮನುಸ್ಮತಿ ದಹಿಸಿ ಮನುವಾದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ ಮನುಸ್ಮತಿಗೆ ಕೊಳ್ಳಿ ಇಟ್ಟು ಸಮತೆಯ ಜ್ಯೋತಿ ಬೆಳಗಿಸೋಣ’ ಘೋಷಣೆಯಡಿ ಮನುಸ್ಮತಿ ದಹಿಸಿ ಸಂವಿಧಾನದ ಆಶಯ ಸಂಪೂರ್ಣ ಅನುಷ್ಠಾನಕ್ಕೆ ಆಗ್ರಹಿಸಿದರು.
ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನುಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿದ ಮನುಸ್ಮತಿ ಯನ್ನು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರು ಸುಟ್ಟುಹಾಕಿ 97 ವರ್ಷ ವಾಗಿದೆ. ಜಾತಿ ಅಸಮಾನತೆ, ಲಿಂಗ ತಾರತಮ್ಯ ದಲಿತರು ಮಹಿಳೆಯರ ಮೇಲಿನ ದಬ್ಬಾಳಿಕೆ, ಬಹುಜನರ ಮೇಲೆ ದೌರ್ಜನ್ಯ ಸತಿಸಹಗಮನ ಪದ್ಧತಿ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಶತಮಾನಗಳ ಕಾಲ ಮುಂದುವರೆಯಲು ಕಾರಣವಾದ ಮನುಸ್ಮತಿಯನ್ನು ಡಾ.ಅಂಬೇಡ್ಕರ್ ಅವರು 1927ರ ಡಿಸೆಂಬರ್ 25ರಂದು ಸಾರ್ವಜನಿಕವಾಗಿ ಸುಟ್ಟು ಹಾಕಿ ಮನುವಾದದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.ಬಾಬಾ ಸಾಹೇಬರು ಮನುಸ್ಮತಿಯನ್ನು ಸುಟ್ಟಿದ್ದು ಚಾರಿತ್ರಿಕ ವಿಧ್ಯಮಾನ ಈ ಪ್ರಕ್ರಿಯೆಯನ್ನು ಪ್ರತಿಯೊಬ್ಬರು ಮುಂದುವರಿಸಬೇಕು. ‘ಮನುಸ್ಮತಿ ಸುಟ್ಟ ದಿನ’ವನ್ನು ದೇಶದಾದ್ಯಂತ ಆಚರಣೆ ಮಾಡಿ ಮನುವಾದಕ್ಕೆ ಪ್ರತಿರೋಧಯೊಡ್ಡ ಬೇಕು, ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಅನುಷ್ಠಾನಗೊಳ್ಳುವವರೆಗೂ ದೇಶದಲ್ಲಿ ಮನುಸ್ಮತಿ ದಹನದ ಪ್ರಕ್ರಿಯೆ ಮುಂದುವರಿಸಬೇಕು ಎಂದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಕರ್ನಾಟಕ ಜನ ಶಕ್ತಿಯ ಸಿದ್ದರಾಜು ಎಂ, ಮಹಿಳಾ ಮುನ್ನಡೆ ಬಿ.ಎಸ್.ಶಿಲ್ಪ, ಜಾಗೃತ ಕರ್ನಾಟಕದ ಎನ್ ನಾಗೇಶ್, ಎನ್ ಸುಬ್ರಹ್ಮಣ್ಯ, ಸಿ.ಕುಮಾರಿ, ಗುಡಿಗೇನಹಳ್ಳಿ ಚಂದ್ರಶೇಖರ್, ಹುರುಗಲವಾಡಿ ರಾಮಯ್ಯ, ಲಕ್ಷ್ಮಣ್ ಚೀರನಹಳ್ಳಿ, ಶಿವಲಿಂಗಯ್ಯ ಗಂಜಾಂ ರವಿ, ವೈ.ರಾಜಶೇಖರ, ರೈತ ಸಂಘದ ಪಾಂಡು, ಗಂಗಾಧರಯ್ಯ, ವಕೀಲ ಬಿ.ಟಿ.ವಿಶ್ವನಾಥ್, ಹೊನ್ನಪ್ಪ, ಶ್ರೀನಿವಾಸ್ ನೇತೃತ್ವ ವಹಿಸಿದ್ದರು.