ಬೆಲೆ ಏರಿಕೆ, ಉದ್ಯೋಗ ಕಡಿತ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Apr 19, 2025 12:45 AM

ಸಾರಾಂಶ

ಕೇಂದ್ರದ ಸರ್ಕಾರದ ಬೆಲೆ ಏರಿಕೆ, ಜನವಿರೋಧಿ ನೀತಿ ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟಿಸಲಾಯಿತು.

- ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯಾಧ್ಯಕ್ಷ ಆನಂದಪ್ಪ ನೇತೃತ್ವದಲ್ಲಿ ಮನವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರದ ಸರ್ಕಾರದ ಬೆಲೆ ಏರಿಕೆ, ಜನವಿರೋಧಿ ನೀತಿ ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟಿಸಲಾಯಿತು.

ನಗರದ ಜಿಲ್ಲಾಡಳಿತ ಭವನ ಎದುರು ಸಂಘಟನೆ ನೇತೃತ್ವದಲ್ಲಿ ಪ್ರತಿಭಟಿಸಿದ ಪದಾಧಿಕಾರಿಗಳು, ಸ್ಲಂ ನಿವಾಸಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ ಮುಖಾಂತರ ಪ್ರಧಾನಿಗೆ ಮನವಿ ಅರ್ಪಿಸಲಾಯಿತು.

ಸಂಘಟನೆ ರಾಜ್ಯಾಧ್ಯಕ್ಷ ಎಲ್.ಆನಂದಪ್ಪ ಮಾತನಾಡಿ, ಕೇಂದ್ರ ಸರ್ಕಾರವು ಅಡುಗೆ ಅನಿಲ ದರ ₹50, ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ₹2 ಹೆಚ್ಚಿಸಿದ್ದು ಖಂಡನೀಯ. ಉದ್ಯೋಗ ಸೃಷ್ಟಿಸುವುದಾಗಿ ಎರಡು ಅವಧಿಗೆ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರವು ಇರುವ ಉದ್ಯೋಗವನ್ನೇ ಕಡಿತಗೊಳಿಸಿ, ನಿರುದ್ಯೋಗ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರದ ಬೆಲೆ ಏರಿಕೆ ಮಧ್ಯೆಯೂ ರಾಜ್ಯದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ ಹಾಸ್ಯಾಸ್ಪದ ಸಂಗತಿ. ಕೇಂದ್ರದ ಆಡಳಿತ ವೈಫಲ್ಯ, ಆರ್ಥಿಕ ನೀತಿಯಿಂದಾಗಿ ಆರ್ಥಿಕ ವ್ಯವಸ್ಥೆಯೇ ನಿಯಂತ್ರಣ ತಪ್ಪಿ, ಜನರು ತತ್ತರಿಸಿದ್ದಾರೆ. ಸರ್ಕಾರದ ಆರ್ಥಿಕ ನೀತಿಯಿಂದಾಗಿ ಸಣ್ಣ ಸಣ್ಣ ಕೈಗಾರಿಕೆಗಳು ನಾಶವಾಗಿ ಸುಮಾರು 1 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಮೂಲಕ ಜನರ ಆದಾಯ ಕಸಿದುಕೊಂಡಿದೆ. ಜನರ ಕಲ್ಯಾಣಕ್ಕಿಂತ ತಮ್ಮ ಆರ್ಥಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಎಲ್.ಆನಂದಪ್ಪ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸಂಘಟನೆ ಮುಖಂಡರಾದ ರೇಣುಕಾ ಯಲ್ಲಮ್ಮ, ಜಿ.ಎಚ್.‌ ಮಂಜುಳಾ, ಶಬ್ಬೀರ್‌ ಸಾಬ್‌, ಜಮ್ಷಿದಾ ಬಾನು, ಗೀತಮ್ಮ, ಬೀಬಿಜಾನ್‌, ರೇಷ್ಮಾ, ರಾಜೇಶ್ವರಿ ಇತರರು ಇದ್ದರು.

- - - -16ಕೆಡಿವಿಜಿ3.ಜೆಪಿಜಿ:

ದಾವಣಗೆರೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಸ್ಲಂ ಜನಾಂದೋಲನ ಕರ್ನಾಟಕದಿಂದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಯಿತು.

Share this article