ಜಲ ಜೀವನ್ ಮಿಷನ್ ಯೋಜನೆಯಡಿ ಅಳವಡಿಸಿರುವ ನಲ್ಲಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬದಲು ಕೊಳಚೆ ನೀರು ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಅಸ್ತೂರು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹನೂರು
ಜಲ ಜೀವನ್ ಮಿಷನ್ ಯೋಜನೆಯಡಿ ಅಳವಡಿಸಿರುವ ನಲ್ಲಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬದಲು ಕೊಳಚೆ ನೀರು ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಅಸ್ತೂರು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರತಿಯೊಬ್ಬರಿಗೂ ಶುದ್ಧಕುಡಿಯುವ ನೀರು ದೊರಕಿಸಿಕೊಡಬೇಕೆಂಬ ನಿಟ್ಟಿನಲ್ಲಿ ಜಾರಿಗೆ ತಂದಿರುವ ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಬದಲು ಕೊಳಚೆ ನೀರು ಪೂರೈಕೆ ಮಾಡುತ್ತಿರುವ ಗ್ರಾಪಂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಅಸ್ತೂರು ಗ್ರಾಮದಲ್ಲಿ 99 ಲಕ್ಷ ವೆಚ್ಚದಲ್ಲಿ ಪ್ರತಿಯೊಂದು ಮನೆಗೂ ನಲ್ಲಿ ಸಂಪರ್ಕ ನೀಡಿ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಬೇಕಿತ್ತು, ಆದರೆ ಬೋರ್ವೆಲ್ ಕೊರೆಸದೆ ಪುರಾತನ ತೆರೆದ ಬಾವಿಯಲ್ಲಿ ಸಂಗ್ರಹವಾಗಿರುವ ಕೊಳಚೆ ನೀರನ್ನು ಪೂರೈಕೆ ಮಾಡುತ್ತಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಸಂಬಂಧಪಟ್ಟ ಗ್ರಾಪಂ. ತಾಪಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಇದರಿಂದ ಬೇಸೆತ್ತ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದ್ದಾರೆ.ಪ್ರತಿಭಟನೆ ವೇಳೆ ಗ್ರಾಮದ ಮುಖಂಡ ರವಿಕುಮಾರ್ ಮಾತನಾಡಿ, ಪ್ರಧಾನ ಮಂತ್ರಿಗಳು ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಲಿ ಎಂಬ ಈ ಮಹತ್ವಾಕಾಂಕ್ಷೆಯ ಯೋಜನೆ ತಂದಿದ್ದಾರೆ. ಆದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಕೊಳಚೆ ನೀರು ಪೂರೈಕೆ ಮಾಡಿ ಅನಾರೋಗ್ಯಕ್ಕೆ ದಾರಿ ಮಾಡಿ ಕೊಡುತ್ತಿದ್ದಾರೆ. ಪೊನ್ನಾಚಿ ಹಾಗೂ ಮರೂರು ಗ್ರಾಮಗಳಲ್ಲಿ ಬೋರ್ವೆಲ್ ಕೊರೆಸಿ ಟ್ಯಾಂಕ್ ನಿರ್ಮಾಣ ಮಾಡಿ ಇದರಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ ಆದರೆ ಅಸ್ತೂರು ಗ್ರಾಮದಲ್ಲಿ ಕೊಳಚೆ ನೀರು ಪೂರೈಕೆ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು? ನಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವವರೆಗೂ ಹಾಗೂ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಕಳಪೆ ಕಾಮಗಾರಿ ಕ್ರಮಕ್ಕೆ ಒತ್ತಾಯ: ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಮಾಡಿರುವ ಕಾಮಗಾರಿ ಕಳಪೆ ಕಾಮಗಾರಿಯಾಗಿದ್ದು ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ವೇಳೆ ಗ್ರಾಮದ ಮುಖಂಡರಾದ ರಂಗ ಮಾದಪ್ಪ, ಚಿಕ್ಕರಂಗೇಗೌಡ, ಮುನಿ ಬಸವೇಗೌಡ, ಉದ್ಯಮಿ ನಾಗೇಶ್, ಕೋಟೆಬಸಪ್ಪ, ಕೆಂಪರಾಜು, ಶಿವಣ್ಣ ತಂಬಡಿ ಮಾದಯ್ಯ, ಪ್ರಭು, ಪುಟ್ಟ ಮಾದಪ್ಪ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.