ಕಂಪ್ಲಿ: ಸುಪ್ರೀಂಕೋರ್ಟ್ ನ್ಯಾಯಾಧೀಶ ಬಿ.ಆರ್. ಗವಾಯಿಗೆ ಶೂ ಎಸೆವ ಯತ್ನ ಖಂಡಿಸಿ ರಾಜ್ಯದಲ್ಲಿನ ಏಡ್ಸ್ ಸಂತ್ರಸ್ತರಿಗೆ ಸರ್ಕಾರದಿಂದ ನಿಗದಿತ ಸಹಾಯಧನ ಹಾಗೂ ಸಾಮಾಜಿಕ ಭದ್ರತೆ ನೀಡುವಂತೆ ಆಗ್ರಹಿಸಿ, ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ಸದಸ್ಯರು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಗ್ರೇಡ್-2 ತಹಸೀಲ್ದಾರ್ ಎಂ.ಆರ್. ಷಣ್ಮುಖಗೆ ಶುಕ್ರವಾರ ಮನವಿ ಸಲ್ಲಿಸಿದರು.
ವೇದಿಕೆಯ ಕಾರ್ಯಾಧ್ಯಕ್ಷ ಟಿ.ಎಚ್.ಎಂ. ರಾಜಕುಮಾರ ಮಾತನಾಡಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದ ಘಟನೆ ನ್ಯಾಯಾಂಗದ ಗೌರವಕ್ಕೆ ಧಕ್ಕೆ ತಂದಂತಾಗಿದೆ. ಇಂತಹ ಅಸಭ್ಯ ಕೃತ್ಯಗಳನ್ನು ಸಮಾಜ ಸಹಿಸದು. ಕಾನೂನು ಉಲ್ಲಂಘಿಸಿದವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ಹೊರ ಹಾಕಿದರು.ರಾಜ್ಯದಲ್ಲಿ ಏಡ್ಸ್ ಕಾಯಿಲೆಯಿಂದ ನರಳುತ್ತಿರುವ ಅನೇಕರು ಸಮಾಜದ ಸಹಾಯವಿಲ್ಲದೇ ಬದುಕು ಸಾಗಿಸುತ್ತಿದ್ದಾರೆ. ಇವರಿಗೆ ಸರ್ಕಾರವು ಪ್ರತಿ ತಿಂಗಳು ವಿಶೇಷ ಮಾಸಾಶನ ನೀಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಬೇಕು. ಬಸ್ ಹಾಗೂ ರೈಲುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಬೇಕು. ಜೊತೆಗೆ ₹10 ಲಕ್ಷ ವಿಮಾ ಯೋಜನೆ ಜಾರಿಗೆ ತರಬೇಕು ಎಂದರು.
ಭಿಕ್ಷುಕರ ತೆರಿಗೆ ಅಥವಾ ಗ್ರಂಥಾಲಯ ತೆರಿಗೆ ವಿಧಿಸುವಂತೆಯೇ ರಾಜ್ಯದ ಸ್ಥಳೀಯ ಸಂಸ್ಥೆಗಳು ‘ಏಡ್ಸ್ ಸಂತ್ರಸ್ತರ ಕಲ್ಯಾಣ ತೆರಿಗೆ’ ವಿಧಿಸುವ ಕುರಿತು ಪರಿಗಣಿಸಬೇಕು. ಈ ಮೂಲಕ ಸಂಗ್ರಹವಾಗುವ ಮೊತ್ತವನ್ನು ಏಡ್ಸ್ ಪೀಡಿತರು ಹಾಗೂ ಅವರ ಕುಟುಂಬಗಳ ಜೀವನೋಪಾಯಕ್ಕೆ ಬಳಸಿದರೆ, ಅವರ ಬದುಕು ಸ್ಥಿರತೆ ಪಡೆಯುತ್ತದೆ ಎಂದರು.ಈ ಸಂದರ್ಭದಲ್ಲಿ ನಾನಾ ಸಂಘಟನೆಗಳ ಪದಾಧಿಕಾರಿಗಳಾದ ಎಚ್.ಗೋಪಾಲ್, ವಸಂತರಾಜ ಕಹಳೆ, ಎಚ್. ಮರಿಯಣ್ಣ, ಕೆ.ಲಕ್ಷ್ಮಣ ಬಸವರಾಜ, ಎ.ಎಸ್. ಯಲ್ಲಪ್ಪ, ವೆಂಕಟೇಶ, ಎಚ್. ಮಂಜು, ರವಿ ಮಣ್ಣೂರು, ಹುಸೇನಪ್ಪ, ರಾಮಾಂಜನೇಯ, ರುದ್ರಪ್ಪ, ಬಸಪ್ಪ, ನಾಗಪ್ಪ ಇದ್ದರು.